Thursday, May 16, 2024
Homeತಾಜಾ ಸುದ್ದಿವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಸೈಕಲ್‍ ನೀಡಲಾಗದಷ್ಟು ದರಿದ್ರ ಬಂದಿದೆಯೇ ಬಿಜೆಪಿ ಸರಕಾರಕ್ಕೆ? ಸಚಿವ ನಾಗೇಶ್‌ ಹೇಳಿಕೆಗೆ...

ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಸೈಕಲ್‍ ನೀಡಲಾಗದಷ್ಟು ದರಿದ್ರ ಬಂದಿದೆಯೇ ಬಿಜೆಪಿ ಸರಕಾರಕ್ಕೆ? ಸಚಿವ ನಾಗೇಶ್‌ ಹೇಳಿಕೆಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ 

spot_img
- Advertisement -
- Advertisement -

ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ನೀಡುವ ವಿಚಾರದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನೀಡಿರುವ ಹೇಳಿಕೆ ಅಮಾನವೀಯ. ಅವರ ಮಾತುಗಳು ಬೇಜವಾಬ್ದಾರಿತನ ಹಾಗೂ ಕ್ರೂರತನದಿಂದ ಕೂಡಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ಚುನಾವಣೆಗಳು ಹತ್ತಿರ ಬಂದಂತೆಲ್ಲ ಬಿಜೆಪಿಗೆ ಸುಳ್ಳು ಹೇಳುವ ದೆವ್ವ ಮೈಮೇಲೆ ಹತ್ತಿ ಕುಣಿಯಲಾರಂಭಿಸುತ್ತದೆ. ತಾವು ಮಾತನಾಡಬೇಕಾದರೆ ಕನಿಷ್ಠ ಮಟ್ಟದ ಪ್ರಜ್ಞೆ, ಲಜ್ಜೆ, ನೈತಿಕತೆ ಇವ್ಯಾವುಗಳೂ ಇಲ್ಲದಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ಅದರ ಭಾಗವಾಗಿ ಕಲಬುರಗಿಯಲ್ಲಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳು ಶಾಲೆಗೆ ಬರುವುದು ಕಲಿಯುವುದಕ್ಕೆ ಹೊರತು, ಶೂ ಸಾಕ್ಸ್ ಹಾಕಿಕೊಳ್ಳುವುದಕ್ಕೆ ಅಲ್ಲ’ ಎಂದಿದ್ದಾರೆ. ನಾನು ನಾಗೇಶ್ ಅವರನ್ನು ಕೇಳಬಯಸುತ್ತೇನೆ, ನಿಮ್ಮ ಮಕ್ಕಳಾಗಲಿ ಅಥವಾ ನೀವಾಗಲಿ ಎಂದಾದರೂ ಕಾಲಿಗೆ ಚಪ್ಪಲಿ ಇಲ್ಲದೆ ಓಡಾಡಿದ ಅನುಭವ ಇದೆಯೆ, ಅದರ ಅವಮಾನ, ಕೀಳರಿಮೆಗಳನ್ನು ಅನುಭವಿಸಿದ ಉದಾಹರಣೆಗಳಿವೆಯೇ? ಎಂದು ಪ್ರಶ್ನಿಸಿದ್ದಾರೆ.

ಕಾನ್ವೆಂಟ್ ಸ್ಕೂಲಿಗೆ ಹೋಗುವ ಮಕ್ಕಳು ಶುಭ್ರ ಬಟ್ಟೆ, ಟೈ, ಕಾಲಿಗೆ ಶೂ, ಸಾಕ್ಸ್ ಹಾಕಿಕೊಂಡು ನಡೆದಾಡುವುದನ್ನು ನೋಡಿದಾಗ ಅದೇ ಬೀದಿಯಲ್ಲಿ, ಅದೇ ಹಳ್ಳಿಯಲ್ಲಿ ಆಟವಾಡುವ ಬಡವರ ಮಕ್ಕಳು ಬರಿಗಾಲಲ್ಲಿ, ಹರಿದ ಬಟ್ಟೆಯಲ್ಲಿದ್ದರೆ ನಿಮಗೆ ಏನೂ ಅನ್ನಿಸುವುದಿಲ್ಲವೇ? ಅಥವಾ ಆ ಕಷ್ಟದಲ್ಲಿರುವ ಮಕ್ಕಳಿಗೆ ಏನನ್ನಿಸುತ್ತದೆ ಎಂಬ ಅರಿವಾದರೂ ಇದೆಯೆ ನಿಮಗೆ? ಅವರು ಹಾಗೆಯೆ ಬರಿಗಾಲಿನಲ್ಲಿ ಇರಬೇಕೆಂದು ರಾಷ್ಟ್ರ ಭಕ್ತಿಯ ಬಗ್ಗೆ ಮಾತನಾಡುವ ಸಂಘ ನಿಮಗೆ ಹೇಳಿಕೊಟ್ಟಿದೆಯೆ? ಎಂದು ಕಿಡಿಕಾರಿದ್ದಾರೆ.

ಶೂದ್ರರ ಬಳಿ ವಿದ್ಯೆ, ಹಣ, ಅಧಿಕಾರಗಳು ಇರಬಾರದೆಂಬ ಕಾರಣಕ್ಕೆ ತಾನೇ ಈ ಸಂಘ ಹುಟ್ಟಿಕೊಂಡು ನಮ್ಮ ಮಕ್ಕಳ ಮೆದುಳಿಗೆ ವಿಷ ಹಾಕುತ್ತಿರುವುದು. ದಲಿತರು, ಅಲೆಮಾರಿಗಳು, ಹಿಂದುಳಿದವರ ಹಾಗೂ ಎಲ್ಲ ಜಾತಿಯ ಬಡವರ ಮಕ್ಕಳಿಗೆ ಸಣ್ಣ ಸ್ವಾಭಿಮಾನ ಇರಲಿ, ಕಲಿಯುವ ಶಾಲೆಗೆ ಹೋಗುವ ಹುಮ್ಮಸ್ಸು ಬರಲಿ ಎಂಬ ಕಾರಣಕ್ಕೆ ನಾವು ಮಕ್ಕಳ ಸ್ನೇಹಿಯಾದ ಯೋಜನೆಗಳನ್ನು ಜಾರಿಗೆ ತಂದಿದ್ದೆವು. ನಿಮ್ಮ ಸರಕಾರಕ್ಕೆ ಮಕ್ಕಳಿಗೆ ಕೊಡಬೇಕಾದ್ದನ್ನು ಕೊಡುವ ಯೋಗ್ಯತೆ ಇಲ್ಲದಿದ್ದರೆ ಅವರನ್ನು ಹಂಗಿಸುವ ಸಾಹಸ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.

ಹಾಗೆ ಬಡವರಿಂದ ದೋಚಿಕೊಂಡ ತೆರಿಗೆ ಹಣವನ್ನು ಏನು ಮಾಡುತ್ತಿದ್ದೀರಿ? 40 ಪರ್ಸೆಂಟ್ ಕಮಿಷನ್ ಸರಕಾರಕ್ಕೆ ಮಕ್ಕಳ ಶಿಕ್ಷಣವನ್ನೂ ನೋಡಿಕೊಳ್ಳುವ ಯೋಗ್ಯತೆ ಇಲ್ಲದ ಮೇಲೆ ನೀವು ಯಾರ ಸುಖಕ್ಕಾಗಿ ಸರ್ಕಾರ ನಡೆಸುತ್ತಿದ್ದೀರಿ? ನಿಮಗೆ ಸಣ್ಣ ಕಾಳಜಿಯೇನಾದರೂ ಇದ್ದರೆ ಹೀಗೆಲ್ಲ ಮಾತನಾಡಲು ಸಾಧ್ಯವೇ? ಎಂದಿದ್ದಾರೆ.

- Advertisement -
spot_img

Latest News

error: Content is protected !!