Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಗೂಡಂಗಡಿ ತೆರವು ಕಾರ್ಯಾಚರಣೆ; ಪೆರಿಯಶಾಂತಿಯಿಂದ ಕುದ್ರಾಯವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ...

ಬೆಳ್ತಂಗಡಿ : ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಗೂಡಂಗಡಿ ತೆರವು ಕಾರ್ಯಾಚರಣೆ; ಪೆರಿಯಶಾಂತಿಯಿಂದ ಕುದ್ರಾಯವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ 60ಕ್ಕೂ ಹೆಚ್ಚು ಅನಧಿಕೃತ ಅಂಗಡಿಗಳ ತೆರವು

- Advertisement -
- Advertisement -

ಬೆಳ್ತಂಗಡಿ : ಕೊಕ್ಕಡ ಮತ್ತು ಪೆರಿಯಶಾಂತಿ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿರುವ ಕಾಡಾನೆಗಳ ಆಕ್ರಮಣದ ಹಿನ್ನಲೆಯಲ್ಲಿ, ಪ್ರಧಾನಮಂತ್ರಿ ಕಾರ್ಯಾಲಯದಿಂದ ಬಂದಿರುವ ಸೂಕ್ತ ಸೂಚನೆ ಮತ್ತು ಸಾರ್ವಜನಿಕರಿಂದ ದಾಖಲಾದ ದೂರುಗಳ ಬೆನ್ನಲ್ಲೇ ಅರಣ್ಯ ಇಲಾಖೆ ತುರ್ತು ಕ್ರಮಕ್ಕೆ ಇಳಿದಿದೆ.

ದುಬಾರೆಯ ವಿಶೇಷ ತಂಡ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯ ನಡುವೆ, ಪೆರಿಯಶಾಂತಿಯ ರಸ್ತೆಬದಿಯಲ್ಲಿ ವ್ಯಾಪಾರಿಗಳು ಬಿಸಾಕಿರುವ ಜೋಳ, ಹಲಸಿನಹಣ್ಣು ಮುಂತಾದ ಆಹಾರತ್ಯಾಜ್ಯಗಳನ್ನು ತಿನ್ನಲು ಆನೆಗಳು ಬರತೊಡಗಿದ ಹಿನ್ನೆಲೆ, ಅಪಾಯದ ಶಂಕೆಯಿಂದ ಅರಣ್ಯ ಇಲಾಖೆ ಗಂಭೀರ ನಿರ್ಧಾರ ಕೈಗೊಂಡಿದೆ.

ಅರಣ್ಯ ಇಲಾಖೆಗೆ ಆನೆಗಳ ಲದ್ದಿ, ಹೆಜ್ಜೆಗುರುತುಗಳು ಸಿಕ್ಕಿದ್ದವು. ಹೀಗೆ ಆಹಾರ ಇಲ್ಲಿಯೇ ಸಿಗುತ್ತದೆ ಎಂಬ ಭಾವನೆ ಆನೆಗಳಲ್ಲಿ ಉಂಟಾದರೆ, ಅವು ಮರಳಿ ಕಾಡಿಗೆ ಹೋಗದೆ ಮತ್ತೆ ಮತ್ತೆ ರಸ್ತೆಯತ್ತ ಬರುತ್ತವೆ ಎಂಬ ಆತಂಕ ಎದ್ದಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ಮುನ್ನೆಚ್ಚರಿಕೆಯಾಗಿ ತೆರವು ಕಾರ್ಯಾಚರಣೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.

ಈ ನಡುವೆ,ಪೆರಿಯಶಾಂತಿಯಿಂದ ಕುದ್ರಾಯವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅನಧಿಕೃತವಾಗಿ ನಡೆಸುವ ಗೂಡಂಗಡಿಗಳನ್ನು ಜುಲೈ 15 ರೊಳಗೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕೆಂದು ಅಧಿಕಾರಿಗಳು ಆದೇಶಿಸಿದ್ದರು. ಕೆಲವರು ಈ ನಿಟ್ಟಿನಲ್ಲಿ ಸಹಕಾರ ನೀಡಿದರೂ, ಬಹುತೇಕರು ನಿರ್ಲಕ್ಷ್ಯ ತೋರಿದ್ದರು. ಇದೀಗ, ಭಾನುವಾರದಂದು ಅಧಿಕಾರಿಗಳಿಂದ ಬಂದ ಖಡಕ್ ಎಚ್ಚರಿಕೆ — “ಅನಧಿಕೃತ ವ್ಯಾಪಾರದಿಂದ ಸಾರ್ವಜನಿಕರಿಗೆ ಕಾಡಾನೆಗಳಿಂದ ಅಪಾಯ ಉಂಟಾದರೆ, ಹೊಣೆಗಾರಿಕೆ ನಿಮ್ಮದೆ, ಕಾನೂನು ಕ್ರಮ ತಪ್ಪದು” ಎಂಬ ಸ್ಪಷ್ಟ ಸಂದೇಶದ ಬೆನ್ನಲ್ಲೇ, ಜುಲೈ 21 ರ ಬೆಳಗ್ಗಿನಿಂದಲೇ ವ್ಯಾಪಾರಸ್ಥರು ಅಂಗಡಿಗಳನ್ನು ಸ್ವಪ್ರೇರಿತವಾಗಿ ತೆರವುಗೊಳಿಸಲು ಮುಂದಾಗಿದ್ದಾರೆ.

ಅರಣ್ಯ ಇಲಾಖೆ, ಪೊಲೀಸರು ಮತ್ತು ಸ್ಥಳೀಯ ಸಿಬ್ಬಂದಿ ಸಮ್ಮುಖದಲ್ಲಿ ಸುಮಾರು 55 ರಿಂದ 60 ಅಂಗಡಿಗಳು ತೆರವುಗೊಂಡಿದ್ದು, ಕೆಲವರು ಈಗಾಗಲೇ ಅಂಗಡಿಗಳನ್ನು ಮುಚ್ಚಿದ್ದರೂ, ಅವರಿಂದ ಬಿಟ್ಟುಹೋಗಿದ್ದ ವಸ್ತುಗಳನ್ನು ಇಲಾಖೆಯ ಸಿಬ್ಬಂದಿಯೇ ತೆರವುಗೊಳಿಸುತ್ತಿರುವುದು ಕಂಡುಬಂದಿದೆ.

ಕಾಡಾನೆಗಳಿಗೆ ಆಹಾರದ ತಕ್ಷಣದ ಲಭ್ಯತೆ ಇಲ್ಲದಂತೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹಲಸಿನಹಣ್ಣಿನ ವಾಸನೆ ಆನೆಗಳನ್ನು ಸೆಳೆಯುತ್ತಿರುವುದರಿಂದ, ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದ್ದು, ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿತ್ತು.

ಈ ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಪ್ರೊಬೆಷನರಿ ಅರಣ್ಯಾಧಿಕಾರಿ ಹಸ್ತಾ ಶೆಟ್ಟಿ, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಉಪವಲಯ ಅಧಿಕಾರಿಗಳಾದ ಶಿವಾನಂದ ಆಚಾರ್ಯ, ಭವಾನಿಶಂಕರ, ಯತೀಂದ್ರ, ರಾಜೇಶ್, ಹಾಗೂ ರಕ್ಷಣಾ ಸಿಬ್ಬಂದಿಯಾದ ಶಿವಾನಂದ ಕುದುರಿ, ಚಂದ್ರು, ವಿನಯಚಂದ್ರ ಆಳ್ವ, ದಿವಾಕರ ರೈ, ವೀಕ್ಷಕರಾದ ದಾಮೋದರ ಪೂಜಾರಿ, ದಿನೇಶ್ ಮತ್ತು ಚಾಲಕರಾದ ಕಿಶೋರ್ ಹಾಗೂ ತೇಜಕುಮಾರ್ ಪಾಲ್ಗೊಂಡಿದ್ದರು.

ಇನ್ನೂ ಮುಂದಿನ ದಿನಗಳಲ್ಲಿ ಪೆರಿಯಶಾಂತಿಯಿಂದ ಕುದ್ರಾಯವರೆಗೆ ಇರುವ ಎಲ್ಲಾ ಅನಧಿಕೃತ ಅಂಗಡಿಗಳ ತೆರವು ಕಾರ್ಯ ಮುಂದುವರಿಯಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂಬ ಅರಣ್ಯ ಇಲಾಖೆಯ ಕೋರಿಕೆ ಮುಂದುವರೆದಿದೆ. “ನಮ್ಮ ಗುರಿ ಕೇವಲ ಕಾನೂನು ಜಾರಿ ಅಲ್ಲ, ಸಾರ್ವಜನಿಕರಿಗೆ ಯಾವುದೇ ರೀತಿಯಾದ ತೊಂದರೆಗಳು ಆಗಬಾರದೆಂಬುದೇ ಸ್ಪಷ್ಟ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ

- Advertisement -

Latest News

error: Content is protected !!