Thursday, May 16, 2024
Homeಕರಾವಳಿಬೆಳ್ತಂಗಡಿ ಮೂಲದ, ಉಜಿರೆ ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿ ಶೇಕ್ ಲತೀಫ್ ಬೆಂಗಳೂರು...

ಬೆಳ್ತಂಗಡಿ ಮೂಲದ, ಉಜಿರೆ ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿ ಶೇಕ್ ಲತೀಫ್ ಬೆಂಗಳೂರು ವಿವಿಯ ನೂತನ ಕುಲಸಚಿವರಾಗಿ ನೇಮಕ

spot_img
- Advertisement -
- Advertisement -

ಬೆಳ್ತಂಗಡಿ ಮೂಲದ, ಉಜಿರೆ ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿ ಶೇಕ್ ಲತೀಫ್ ಬೆಂಗಳೂರು ವಿವಿಯ ನೂತನ ಕುಲಸಚಿವರಾಗಿ ನೇಮಕವಾಗಿದ್ದಾರೆ.ಕೆಎಎಸ್ ಅಧಿಕಾರಿಯಾಗಿರುವ ಶೇಕ್ ಲತೀಫ್ ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಣಕಾಸು ಸದಸ್ಯರಾಗಿದ್ದರು.

ಪ್ರಾರಂಭದಲ್ಲಿ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ವಿಭಾಗದ ಸಹಾಯಕ ನಿಯಂತ್ರಣ ಅಧಿಕಾರಿಯಾಗಿದ್ದ ಶೇಕ್ ಲತೀಫ್ ಪದವಿ ಪೂರ್ವ ಶಿಕ್ಷಣ ಇಲಾಖಾ ಲೆಕ್ಕಾಧಿಕಾರಿಯಾಗಿ, ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಯಾಗಿ, ಕರ್ನಾಟಕ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಹಣಾಧಿಕಾರಿಯಾಗಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ, ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಆರ್ಥಿಕ ಸಲಹೆಗಾರರಾಗಿ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರದಾನ ವ್ಯವಸ್ಥಾಪಕರಾಗಿ (ಆರ್ಥಿಕ) ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ದಿಲ್ಲಿಯ ಇನ್ ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಇವರು ಸದ್ಯ ಅದರ ಫೆಲೋ ಮೆಂಬರ್ (ಎಫ್.ಸಿ.ಎಸ್.) ಆಗಿದ್ದಾರೆ.1995-96ರಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಬಿ.ಕಾಂ ನಲ್ಲಿ ಎರಡನೇ ರ್ಯಾಂಕ್ ಪಡೆದಿರುವ ಶೇಕ್ ಲತೀಫ್ ಬಿ.ಕಾಂ. (ಕಾನೂನು ಮತ್ತು ಬ್ಯಾಂಕಿಂಗ್ ಅಭ್ಯಾಸ) ದಲ್ಲಿ ಅತ್ಯಧಿಕ ಅಂಕ ಪಡೆದು ಎ.ಬಿ.ಶೆಟ್ಟಿ ಸ್ಮಾರಕ ಚಿನ್ನದ ಪದಕ ಗಳಿಸಿದ್ದರು. 97-98ರಲ್ಲಿ ಎಂ.ಬಿ.ಎ. ಯಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಚಿನ್ನದ ಪದಕದ ಗೌರವಕ್ಕೆ ಭಾಜನರಾಗಿದ್ದರು. ವೈಶ್ಯ ಬ್ಯಾಂಕ್ ಕೂಡಾ ಈ ಸಂದರ್ಭ ಚಿನ್ನದ ಪದಕ ನೀಡಿ ಗೌರವಿಸಿತ್ತು.

ಬೆಳ್ತಂಗಡಿ ತಾಲೂಕಿನ ಉಜಿರೆಯ ಓಡಲ ನಿವಾಸಿ ಶೇಕ್ ಫಕೀರ್ ಸಾಹೇಬ್ ಹಾಗೂ ರಶೀದಾಬಿ ದಂಪತಿಯ ಪುತ್ರರಾಗಿರುವ ಶೇಖ್ ಲತೀಫ್ ಉಜಿರೆಯ ದೊಂಪದಪಲ್ಕೆ ಓಡಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದವರು. ಎಸೆಸೆಲ್ಸಿ ತರಗತಿ ತನಕ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸಗೈದ ಅವರು, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಬಿ.ಎ. ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೆ ತೇರ್ಗಡೆಯಾಗಿದ್ದರು.

1998ನೇ ಸಾಲಿನ ಗಜೆಟೆಡ್ ಪ್ರೊಬೆಷನರಿ ಅಧಿಕಾರಿಯಾಗಿದ್ದು, ಹುದ್ದೆ ಬದಲಾವಣೆಯಿಂದ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ಕಂದಾಯ ಇಲಾಖೆಗೆ ತಹಶೀಲ್ದಾರ್ ಆಗಿ ಬದಲಾವಣೆ ಹೊಂದಿ ನಂತರ ಸಹಾಯಕ ಆಯುಕ್ತರಾಗಿ (ಕೆಎಎಸ್ ಕಿರಿಯ ಶ್ರೇಣಿ), ಬಳಿಕ ಹಿರಿಯ ಶ್ರೇಣಿ ಹಾಗೂ ಪ್ರಸ್ತುತ ಕೆಎಎಸ್ ಆಯ್ಕೆ ಶ್ರೇಣಿಗೆ ಪದೋನ್ನತಿ ಹೊಂದಿದ್ದಾರೆ.

- Advertisement -
spot_img

Latest News

error: Content is protected !!