ಪುಣೆ : ಪ್ರತಿಭೆ ಅನ್ನೋದು ಯಾರಪ್ಪನ ಸೊತ್ತಲ್ಲ. ನಮ್ಮಲ್ಲಿ ಪ್ರತಿಭೆ ಇದ್ದರೆ ಅದು ಒಂದಲ್ಲ ಒಂದು ರೀತಿಯಲ್ಲಿ ಹೊರಗೆ ಬಂದೇ ಬರುತ್ತೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಜ್ಜಿಯೊಬ್ಬರು ಭಾರೀ ಸದ್ದು ಮಾಡುತ್ತಿದ್ದಾರೆ. ಕೋಲೊಂದರಲ್ಲಿ ಅವರು ತೋರುವ ಕೈಚಳಕದ ವಿಡಿಯೋ ಫುಲ್ ವೈರಲ್ ಆಗಿದೆ. ಅಂದ್ಹಾಗೆ ಈ ಅಜ್ಜಿಯ ಹೆಸರು ಶಾಂತಾಬಾಯ್ ಪವಾರ್. ಪುಣೆಯ ಹದಾಪ್ಸಾರ್ ನಿವಾಸಿ ಅಜ್ಜಿಯ ಜೀವನೋತ್ಸಾಹಕ್ಕೆ ಮಾತ್ರ ಹ್ಯಾಟ್ಯಾಫ್ ಹೇಳಲೇ ಬೇಕು.
ಕೊರೊನಾದಿಂದಾಗಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಮಾಡೋರಿಗೆ ಸಿಕ್ಕಾಪಟ್ಟೆ ಸಮಸ್ಯೆಯಾಗಿದೆ. ಬಹುತೇಕರ ಬದುಕು ಬೀದಿಗೆ ಬಂದಿದೆ. ಈ ವಿಡಿಯೋದಲ್ಲಿರುವ ಅಜ್ಜಿಯದ್ದು ಕೂಡ ಅದೇ ಪರಿಸ್ಥಿತಿ. ಆದರೆ ಬರೀ ಭಿಕ್ಷೆ ಬೇಡಿ ತಿನ್ನೋದಕ್ಕೆ ಮನಸ್ಸಿಲ್ಲದ ಅಜ್ಜಿ ಪುಣೆಯ ಹದಾಪ್ಸಾರ್ ನಲ್ಲಿ ರಸ್ತೆ ಬದಿಯಲ್ಲಿ ಹೀಗೆ ಕೋಲಿನಲ್ಲೇ ತನ್ನ ಕೈಚಳಕ ತೋರಿಸಿ ಜನರ ಬಳಿ ಹಣ ಕೇಳುತ್ತಿದ್ದಾರೆ. ಇಳಿ ವಯಸ್ಸಿನಲ್ಲೂ ಬೇಡಿ ತಿನ್ನದೇ ತನ್ನಲ್ಲಿರುವ ಪ್ರತಿಭೆಯ ಮೂಲಕ ಜೀವನಕ್ಕೆ ಒಂದು ದಾರಿ ಕಂಡುಕೊಂಡಿದ್ದಾರೆ ಈ ಅಜ್ಜಿ. ವಾಹನ ಸವಾರರು ತನ್ನ ಕಲೆಯನ್ನು ನೋಡಿ ನೀಡುವ ದುಡ್ಡಿನಲ್ಲೇ ಅಜ್ಜಿ ಜೀವನ ನಿರ್ವಹಿಸುತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪುಣೆಯ ಪೊಲೀಸ್ ಕಮೀಷನರ್ ಈ ಟ್ವಿಟರ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು, ಪ್ರತಿಭೆಗೆ ಯಾವುದೇ ಮಿತಿಯಿಲ್ಲ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.