ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಆರೋಪ ಹಿನ್ನೆಲೆಯಲ್ಲಿ ನಟಿ ಸಂಜನಾ ಗಲ್ರಾಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಜಾಲದ ನಂಟು ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಂಜನಾ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಶೋಧ ಕಾರ್ಯದ ಬಳಿಕ ನಟಿ ಸಂಜನಾ ಅವರನ್ನು ಬಂಧಿಸಿದೆ.
ಡ್ರಗ್ಸ್ ದಂಧೆಯಲ್ಲಿ ನಟಿ ಸಂಜನಾ ಹೆಸರು ಕೇಳಿ ಬರುತ್ತಿದ್ದು, ಈಗಾಗಲೇ ಸಂಜನಾ ಆಪ್ತ ರಾಹುಲ್ ನನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ರಾಹುಲ್ ಹೇಳಿಕೆ ಆಧಾರದ ಮೇಲೆ ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ ನಡೆಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದಿದೆ.
ಏಕಾಏಕಿ ದಾಳಿ ಮಾಡಿದ್ದೀರಿ, ನಾನು ಬರೋದಿಲ್ಲ
ನಾನೇಕೆ ನಿಮ್ಮೊಂದಿಗೆ ಬರಬೇಕು, ನೀವು ನನಗೆ ನೋಟಿಸ್ ನೀಡಿಲ್ಲ, ಏಕಾಏಕಿ ದಾಳಿ ನಡೆಸಿದ್ದೀರಿ? ನೇನೇನು ಆರೋಪಿನಾ? ನಾನು ಬರುವುದಿಲ್ಲ ಎಂದು ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲು ಮುಂದಾದ ಸಿಸಿಬಿ ಪೊಲೀಸರ ಮೇಲೆ ನಟಿ ಸಂಜನಾ ಗುಲ್ರಾನಿಯವರು ಕೂಗಾಡಿ ರಂಪಾಟ ಮಾಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಸಿಸಿಬಿ ದಾಳಿ ವೇಳೆ ನಟಿ ಸಂಜನಾ ಮನೆಯಲ್ಲಿ ಮಲಗಿದ್ದು, ನಿದ್ರೆಯಿಂದ ಎದ್ದಿರಲಿಲ್ಲ. ಸಿಸಿಬಿ ಪೊಲೀಸರು ಮನೆಯ ಬಳಿ ಬಂದ ಸಂದರ್ಭದಲ್ಲಿ ಸಂಜನಾ ತಾಯಿ ಬಾಗಿಲು ತೆಗೆದಿದ್ದಾರೆ. ನಂತರ ನೋಟಿಸ್ ತೋರಿಸಿದ ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಮಲಗಿದ್ದ ಸಂಜನಾ ಅವರಿಗೆ ವಿಚಾರವನ್ನು ತಿಳಿಸಿ, ತನಿಖೆಗೆ ಸಹಕಾರ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಸಂಜನಾ ಅವರನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.