ಬೆಂಗಳೂರು: ಹಿಂದಿ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಹೆಸರಿನಲ್ಲಿರುವ ‘ರೋಲ್ಸ್ ರಾಯ್ಸ್ ಕಾರು ಸೇರಿ ಮೋಟಾರು ವಾಹನ ನಿಯಮ ಉಲ್ಲಂಘನೆ ಆರೋಪದಡಿಯಲ್ಲಿ ಕೋಟ್ಯಂತರ ರೂ. ಮೌಲ್ಯದ 7 ಐಷಾರಾಮಿ ಕಾರುಗಳನ್ನು ಆರ್ಟಿಒ ಅಧಿಕಾರಿಗಳು ಭಾನುವಾರ ಜಪ್ತಿ ಮಾಡಿದ್ದಾರೆ.
ಬೆಂಗಳೂರಿನ ಯುಬಿ ಸಿಟಿಯಲ್ಲಿ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ ಕಾರನ್ನು ಸೂಕ್ತ ದಾಖಲೆ ಇಲ್ಲದ ಕಾರಣಕ್ಕೆ ಸಾರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಎರಡು ವರ್ಷದಿಂದ ಇನ್ಶುರೆನ್ಸ್ ಇಲ್ಲದೇ, ಮಹಾರಾಷ್ಟ್ರ ರಿಜಿಸ್ಟರ್ ಆಗಿರುವ ರೋಲ್ಸ್ ರಾಯ್ ಕಾರು ಇನ್ನೂ ಅಮಿತಾಭ್ ಬಚ್ಚನ್ ಹೆಸರಿನಲ್ಲೇ ಇದೆ. ಉದ್ಯಮಿ ಬಾಬು 2019 ರಲ್ಲಿ 6 ಕೋಟಿ ರೂ. ಕೊಟ್ಟು ಅಮಿತಾಭ್ ಬಚ್ಚನ್ ಬಳಿ ಈ ಖರೀದಿ ಮಾಡಿದ ವಿಚಾರ ಪರಿಶೀಲನೆ ವೇಳೆ ತಿಳಿದು ತಿಳಿದುಬಂದಿದ್ದು, ವಾಹನದ ಎಲ್ಲಾ ದಾಖಲೆ ಗಳು ಇನ್ನೂ ಬಚ್ಚನ್ ಹೆಸರಲ್ಲೇ ಇರೋದು ಪತ್ತೆಯಾಗಿದೆ
ಯಾರದ್ದೋ ಹೆಸರಿನಲ್ಲಿರುವ ಕಾರುಗಳನ್ನು ಇನ್ಯಾರೋ ಓಡಿಸುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು, ವಾಹನಗಳಿಗೆ ಸಂಬಂಧಿಸಿದ ಅಸಲಿ ದಾಖಲೆ ಪತ್ರಗಳು ಯಾರ ಬಳಿಯೂ ಪತ್ತೆಯಾಗದಿರುವುದು ಅನುಮಾನ ಮೂಡಿಸಿದೆ. ಭಾನುವಾರ ಸಂಜೆ ಕಬ್ಬನ್ಪಾರ್ಕ್ ಸಮೀಪದ ಯುಬಿ ಸಿಟಿಗೆ ಕಾರುಗಳು ಬರುವ ಮಾಹಿತಿ ಮೇರೆಗೆ ಆರ್ಟಿಒ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ರೋಲ್ಸ್ ರೊಯ್ಸ್ ಮತ್ತು ಪೋರ್ಶೆಯಂತಹ ಹೈ ಎಂಡ್ ಕಾರುಗಳನ್ನು ತಡೆದು ಪರಿಶೀಲನೆ ನಡೆಸಲಾಯಿತು.
ಆರ್ಸಿ ಕಾರ್ಡ್, ಇನ್ಶುರೆನ್ಸ್, ಎಮಿಷನ್ ಸರ್ಟಿಫಿಕೇಟ್ ಸೇರಿ ವಾಹನಗಳಿಗೆ ಸಂಬಂಧಿಸಿದ ದಾಖಲೆ ಇರಲಿಲ್ಲ. ತೆರಿಗೆ ವಂಚಿಸುವ ಉದ್ದೇಶದಿಂದ ಪಾಂಡಿಚೇರಿ, ದೆಹಲಿ ಮತ್ತು ಪಂಜಾಬ್ ಸೇರಿ ಬೇರೆಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಸಿ, ರಾಜ್ಯದಲ್ಲಿ ಓಡಿಸುತ್ತಿರುವುದು ಪರಿಶೀಲನೆಯಲ್ಲಿ ಗೊತ್ತಾಗಿದೆ. ಬೇರೆ ರಾಜ್ಯದಲ್ಲಿ ನೋಂದಣಿಯಾದ ವಾಹನ 1 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ರಾಜ್ಯದಲ್ಲಿರುವಂತಿಲ್ಲ. 1 ವರ್ಷ ಮೇಲ್ಪಟ್ಟರೆ ನೋಂದಣಿಯನ್ನು ಇಲ್ಲಿಗೆ ವರ್ಗಾಯಿಸಿಕೊಂಡು ತೆರಿಗೆ ಪಾವತಿಸಬೇಕು. ಆದರೆ, ಮಾಲೀಕರು ತೆರಿಗೆ ಪಾವತಿಸದೆ ನಿಯಮಬಾಹಿರವಾಗಿ ರಾಜ್ಯದಲ್ಲಿ ವಾಹನ ಚಲಾಯಿಸುತ್ತಿರುವುದು ಪರಿಶೀಲನೆಯಲ್ಲಿ ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.