Saturday, May 18, 2024
Homeಕರಾವಳಿಹಾಸನ, ಚಿಕ್ಕಮಗಳೂರಿನಲ್ಲಿ ವರುಣನ ಅಬ್ಬರ, ಚಾರ್ಮಾಡಿಯಲ್ಲಿ ಮತ್ತೆ ಶುರುವಾಗಿದೆ ಆತಂಕ

ಹಾಸನ, ಚಿಕ್ಕಮಗಳೂರಿನಲ್ಲಿ ವರುಣನ ಅಬ್ಬರ, ಚಾರ್ಮಾಡಿಯಲ್ಲಿ ಮತ್ತೆ ಶುರುವಾಗಿದೆ ಆತಂಕ

spot_img
- Advertisement -
- Advertisement -

ಚಿಕ್ಕಮಗಳೂರು : ಚಿಕ್ಕಮಗಳೂರು ಮತ್ತು ಹಾಸನದಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರೀ ಮಳೆ ಜತೆಗೆ ಬಿರುಸಿನ ಗಾಳಿಯಿಂದ ಹಲವೆಡೆ ಮರ, ವಿದ್ಯುತ್ ಕಂಬಗಳು ಉರುಳಿಬಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ಚಿಕ್ಕಮಗಳೂರಿನ ವಿವಿಧೆಡೆ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಮಲೆನಾಡಿಗರು ಕಂಗಾಲಾಗಿದ್ದಾರೆ. ಕೊಟ್ಟಿಗೆಹಾರ, ಮಲಯಮಾರುತ ಬಳಿ ರಸ್ತೆ ಕುಸಿದಿದೆ. ಚಾರ್ಮಡಿ ಘಾಟ್‍ನಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಪ್ರಯಾಣಿಕರು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ.

ಕೆಲವೆಡೆ ಗುಡ್ಡದ ಮಣ್ಣು ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಕೊಟ್ಟಿಗೆಹಾರದಲ್ಲಿ 13 ಸೆಂ.ಮೀ. ದಾಖಲೆಯ ಮಳೆಯಾಗಿದೆ. ನಿನ್ನೆ ರಾತ್ರಿ ಕೂಡ ಬಿರುಗಾಳಿ ಸಮೇತ ಹೆಚ್ಚಿನ ಮಳೆ ಬಿದ್ದಿದೆ. ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು, ಅದಕ್ಕೆ ಸೇರುವ ಎಲ್ಲ ಕಿರುಕಾಲುವೆಗಳು ಕೂಡ ತುಂಬಿ ಹರಿಯುತ್ತಿವೆ. ಕೆಲವೆಡೆ ಮರಗಳು ರಸ್ತೆಗೆ ಉರುಳಿದ್ದರೂ ಗ್ರಾಮಸ್ಥರು ಅದನ್ನು ತೆರವುಗೊಳಿಸಿ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಬಣಕಲ್ ಸಮೀಪ ನ್ಯಾಯಬೆಲೆ ಅಂಗಡಿಯ ತಡೆಗೋಡೆ ಕುಸಿದುಬಿದ್ದಿದೆ. ಕೊಪ್ಪ, ಎನ್‍ಆರ್ ಪುರ, ಶೃಂಗೇರಿ, ಮೂಡಿಗೆರೆ ಸೇರಿದಂತೆ ಚಿಕ್ಕಮಗಳೂರಿನ ಏಳು ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಮಲೆನಾಡಿಗರು ಮನೆಯಿಂದ ಹೊರಬರುವುದಕ್ಕೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೌಡಳ್ಳಿ, ಭೈರಾಪುರ, ಗುತ್ತಿ, ದೇವರಮನಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ನಾಟಿ ಮಾಡಿದ ಗದ್ದೆಯ ಮೇಲೆ ಮೂರ್ನಾಲ್ಕು ಅಡಿ ನೀರು ನಿಂತಿದೆ.

ಮೂಡಿಗೆರೆ ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಬಹುತೇಕ ಬಂದ್ ಆಗಿವೆ. ಹಲವು ಮನೆಗಳ ಹೆಂಚುಗಳು ಹಾರಿ ಹೋಗಿ ಇನ್ನೂ ಮಳೆ ಮುಂದುವರಿದಿರುವುದರಿಂದ ಮತ್ತೇನು ಅನಾಹುತ ಸೃಷ್ಟಿಯಾಗುತ್ತದೋ ಎಂಬ ಆತಂಕದಲ್ಲಿ ಜನ ಇದ್ದಾರೆ.

ಇತ್ತ ಕಳೆದೆರಡು ದಿನಗಳಿಂದ ಹಾಸನ ಜಿಲ್ಲೆಯಲ್ಲೂ ವಿವಿಧೆಡೆ ಭಾರೀ ಮಳೆ ಎಡೆಬಿಡದೆ ಸುರಿಯುತ್ತಿದೆ. ಸಕಲೇಶಪುರ, ಹಾಸನ, ಬೇಲೂರು ತಾಲ್ಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು, ಭಾರೀ ಗಾತ್ರದ ಮರಗಳು ನೆಲಕ್ಕುರುಳಿವೆ.

ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ-75ರ ಬಾಳ್ಳುಪೇಟೆ ಸಮೀಪ ಬೃಹತ್ ಗಾತ್ರದ ಮರ ನೆಲಕ್ಕುರುಳಿದ ಪರಿಣಾಮ ಕೆಲಕಾಲ ಸಂಚಾರ ಬಂದ್ ಆಗಿತ್ತು.

ಸಕಲೇಶಪುರ ಪಟ್ಟಣದ ನರ್ಸ್ ಕ್ವಾಟ್ರರ್ಸ್‍ನಲ್ಲಿರುವ ಮನೆಯ ಮೇಲೆ ಮರ ಬಿದ್ದು ಮನೆಯಲ್ಲಿದ್ದ ಮಹಿಳೆಗೆ ಗಾಯವಾಗಿದೆ. ಸಕಲೇಶಪುರ ತಾಲ್ಲೂಕಿನ ವರ್ತೂರು, ಎಳಸೂರು, ಐಗೂರು, ಬನ್ನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ.

ಉತ್ತರ ಕರ್ನಾಟಕದ ವಿವಿಧೆಡೆ ಕೂಡ ಭಾರೀ ಮಳೆಯಾಗುತ್ತಿದೆ. ಮಲೆನಾಡು, ಕರಾವಳಿಯಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿರುವುದರಿಂದ ತುಂಗಭದ್ರಾ, ಹೇಮಾವತಿ, ಗಂಗಾವಳಿ, ವರದಾ, ಅಗನಾಶಿನಿ, ಶರಾವತಿ ನದಿಗಳು ತುಂಬಿ ಹರಿಯುತ್ತಿವೆ. ಕೊಡಗು ಸುತ್ತಮುತ್ತಲೂ ಕೂಡ ಭಾರೀ ಮಳೆಯಾಗುತ್ತಿದೆ.

- Advertisement -
spot_img

Latest News

error: Content is protected !!