
ಬೆಂಗಳೂರು: ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿ ಎಂ.ಜಿ. ಪುನೀತ್ ಪ್ರತಿಕೂಲ ಹೇಳಿಕೆ ನೀಡಿದ್ದಾರೆ.
ನಗರದ 58ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬುಧವಾರ ವಿಚಾರಣೆ ನಡೆಯಿತು. ಈ ವೇಳೆ ಪುನೀತ್, 2024ರ ಜೂನ್ 8ರಂದು ಬೆಳಗ್ಗೆ ಪಟ್ಟಣಗೆರೆ ಶೆಡ್‌ಗೆ ಹೋಗಿದ್ದೆ. ಮಧ್ಯಾಹ್ನ ಶೆಡ್‌ಗೆ ಮರಳಿ, ಸಂಜೆ 6.30ರವರೆಗೆ ಅಲ್ಲಿದ್ದೆ. ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದೆ ಎಂದು ತಿಳಿಸಿದರು.
ಶೆಡ್‌ನಲ್ಲಿ ಕೊಲೆ ನಡೆದಿರುವ ವಿಷಯವನ್ನು ನಾನು ಟಿವಿಯಲ್ಲಿ ನೋಡಿದ್ದೆ. ಪ್ರಕರಣದ ಆರೋಪಿಗಳನ್ನು ನಾನು ನೋಡಿಲ್ಲ. ಪೊಲೀಸರು ವಿಚಾರಣೆ ನಡೆಸಿದಾಗಲೂ ಕೊಲೆಗೆ ಸಂಬಂಧಿಸಿದ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಇದರಿಂದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು ಪುನೀತ್ ಅವರನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಿ ಪಾಟಿ ಸವಾಲು ನಡೆಸಲು ಅನುಮತಿ ಕೋರಿದರು. ನ್ಯಾಯಾಲಯ ಅನುಮತಿ ನೀಡಿದ ಬಳಿಕ ಪಾಟಿ ಸವಾಲು ನಡೆಸಲಾಯಿತು.
ಈ ವೇಳೆ ಶೆಡ್ ಮಾಲೀಕ ದೀಪಕ್ ಅವರ ಅಕ್ಕನ ಮಗ ವಿನಯ್ ಈ ಪ್ರಕರಣದ 10ನೇ ಆರೋಪಿ ಎಂದು ಪುನೀತ್ ತಿಳಿಸಿ, ನ್ಯಾಯಾಲಯದಲ್ಲಿದ್ದ ವಿನಯ್ ಅವರನ್ನು ಗುರುತಿಸಿದರು.
ಬಳಿಕ ಪುನೀತ್ ಅವರ ಪಾಟಿ ಸವಾಲು ಪ್ರಕ್ರಿಯೆಯನ್ನು ನ್ಯಾಯಾಲಯ ಮುಂದೂಡಿತು.


