ಮಂಗಳೂರು: ಭರತನಾಟ್ಯ ಕ್ಷೇತ್ರದಲ್ಲಿ ಇದೀಗ ಭಾರೀ ಸದ್ದು ಮಾಡುತ್ತಿರುವ ಹೆಸರು ಮಂಗಳೂರಿನ ರೆಮೋನಾ ಪಿರೇರಾ ಅವರದ್ದು. ಕಳೆದ ಏಳು ದಿನಗಳಿಂದ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ದಾಖಲೆ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನ ನಮೂದಿಸಿ ಮಂಗಳೂರಿನ ಕೀರ್ತಿಯನ್ನ ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ
ರೆಮೋನಾ ಪಿರೇರಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡದಿಂದ ಅಧಿಕೃತವಾಗಿ ಸಂತ ಅಲೋಶಿಯಸ್ ವಿ.ವಿ.ಯಲ್ಲಿ ಜು.28 ರಂದು ನಡೆದ ಕಾರ್ಯಕ್ರಮದಲ್ಲಿ ಘೋಷಣೆ ಪಡೆದುಕೊಂಡು, ಪ್ರಶಸ್ತಿ ಸ್ವೀಕರಿಸಿದರು.
ಮಂಗಳೂರಿನ ಸಂತ ಅಲೋಶಿಯಸ್ ವಿ.ವಿ.ಯ ವಿದ್ಯಾರ್ಥಿನಿಯಾಗಿರುವ ರೆಮೋನಾ ಅವರು ಇದೇ ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್‌ನಲ್ಲಿ ಜು. 21ರಂದು ಬೆಳಗ್ಗೆಯಿಂದ ಭರತನಾಟ್ಯ ಪ್ರದರ್ಶವನ್ನು ಆರಂಭಿಸಿ ಜು.28 ರ ಮಧ್ಯಾಹ್ನವರೆಗೆ ಹಗಲು-ರಾತ್ರಿ ಎನ್ನದೇ ಪ್ರದರ್ಶನವನ್ನ ನೀಡಿದ್ದಾರೆ. ಈ ಮೂಲಕ 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರೆಮೋನಾ ಅವರ ಸಾಧನೆಗೆ ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು, ಸಾರ್ವಜನಿಕರು ಅಭಿನಂದಿಸಿದ್ದಾರೆ.


