ಚಂಡೀಘಡ: ಪಂಜಾಬ್ ನಲ್ಲಿ ಲಾಕ್ ಡೌನ್ ಮಧ್ಯೆ ಅನಗತ್ಯವಾಗಿ ಪಾಸ್ ಇಲ್ಲದೆ ಬೈಕ್ ನಲ್ಲಿ ತಿರುಗುತ್ತಿದ್ದ ನಿಹಾಂಗ್ ಸಿಖ್ ಯುವಕರ ಬೈಕ್ ನ್ನು ಪೊಲೀಸರು ತಡೆದಾಗ ಯುವಕರು ಪೋಲೀಸರ ಮೇಲೆಯೇ ದಾಳಿ ಮಾಡಿ ಪೊಲೀಸ್ ಅಧಿಕಾರಿಯ ಕೈಯನ್ನೇ ಕತ್ತರಿಸಿದ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದ್ದು.
ಇದೀಗ ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದ ಕೈ ಯನ್ನು ವೈದ್ಯರು ಸತತ ಏಳೂವರೆ ಗಂಟೆಗಳ ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿ ಮರು ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯರ ಈ ಸಾಹಸಕ್ಕೆ ದೇಶದ ಮೂಲೆ ಮೂಲೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಈ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಹಾಗೇ, ಎಎಸ್ಐ ಹರ್ಜೀತ್ ಸಿಂಗ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಚಂಡೀಘಡ್ ನಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರೊಫೆಸರ್ ಡಾ.ರಮೇಶ್ ಶರ್ಮಾ ಅವರ ನೇತೃತ್ವದ ತಂಡ ಈ ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿದ್ದು, ವೈದ್ಯರ ತಂಡಕ್ಕೆ ದೇಶದ ಮೂಲೆ ಮೂಲೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ