Saturday, June 6, 2026
Homeಕರಾವಳಿಉಡುಪಿರಾಮಮಂದಿರ ಭೂಮಿ ಪೂಜೆಗೆ ಡಾ.ಡಿ ವೀರೇಂದ್ರ ಹೆಗ್ಗಡೆ, ಪೇಜಾವರ ಸ್ವಾಮೀಜಿ ಸೇರಿ ರಾಜ್ಯದ ಎಂಟು ಗಣ್ಯರಿಗೆ...

ರಾಮಮಂದಿರ ಭೂಮಿ ಪೂಜೆಗೆ ಡಾ.ಡಿ ವೀರೇಂದ್ರ ಹೆಗ್ಗಡೆ, ಪೇಜಾವರ ಸ್ವಾಮೀಜಿ ಸೇರಿ ರಾಜ್ಯದ ಎಂಟು ಗಣ್ಯರಿಗೆ ಆಹ್ವಾನ

- Advertisement -
- Advertisement -

ಉಡುಪಿ:ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದ್ದು, ಭರ್ಜರಿ ಸಿದ್ದತೆಗಳು ಜರುಗುತ್ತಿವೆ. ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ನಾನಾ ರಾಜ್ಯಗಳಿಂದ ಗಣ್ಯರನ್ನು ಆಹ್ವಾನಿಸುತ್ತಿದ್ದು, ಕರ್ನಾಟಕದ ಎಂಟು ಗಣ್ಯರಿಗೆ ವಿಶೇಷ ಆಹ್ವಾನ ನೀಡಲಾಗಿದೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಆಹ್ವಾನಿಸಲಾದ ಎಂಟು ಮಂದಿ ವಿಶೇಷ ಆಹ್ವಾನಿತರ ಪಟ್ಟಿ ಇಲ್ಲಿದೆ.

  • ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
  • ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ,
  • ಇಸ್ಕಾನ್ ನ ಮಧುಪಂಡಿತ ದಾಸ್,
  • ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ,
  • ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ,
  • ಸುತ್ತೂರು ಮಠದ ಶ್ರೀಗಳು,
  • ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ
  • ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ ಅಹ್ವಾನ ಪಡೆದ ಪ್ರಮುಖರಾಗಿದ್ದಾರೆ.

ಈಗಾಗಲೇ ರಾಜ್ಯದ ಎಲ್ಲಾ ನದಿಗಳು ಮತ್ತು ಧಾರ್ಮಿಕ ಸ್ಥಳಗಳಿಂದ ಅಯೋಧ್ಯೆಗೆ ಜಲ ಮತ್ತು ಮಣ್ಣು ಕಳುಹಿಸಲಾಗಿದೆ. ದೇವಾಲಯದ ಸ್ಥಳವನ್ನು ಪವಿತ್ರಗೊಳಿಸಲು ಜಲವನ್ನು ಬಳಸಲಾಗುತ್ತದೆ ಎಂದು ವಿಶ್ವಹಿಂದೂ ಪರಿಷತ್‍ ಪ್ರಚಾರ ಪ್ರಮುಖ್ ಬಸವರಾಜ್ ಹೇಳಿದ್ದಾರೆ.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾವೇರಿ ಮತ್ತು ಕಪಿಲಾ ನದಿಗಳ ಜಲ ಕಳುಹಿಸಿದ್ದಾರೆ. ಧರ್ಮಸ್ಥಳ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ನೇತ್ರಾವತಿ ನದಿಯಿಂದ ನೀರನ್ನು ಕಳುಹಿಸಿದರೆ, ಶೃಂಗೇರಿ ಮಠದ ಶಂಕರಾಚಾರ್ಯ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಅವರು ತುಂಗಾ, ಭದ್ರಾವತಿ ಮತ್ತು ಶರಾವತಿ ಜಲವನ್ನು ಕಳುಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಾಗೆಯೇ ಕೃಷ್ಣಾ, ಭೀಮ, ಮಲಪ್ರಭ ಮತ್ತು ಘಟಪ್ರಭದಂತಹ ಎಲ್ಲಾ ಪ್ರಮುಖ ನದಿಗಳಿಂದ ವಿವಿಧ ಮಠಾಧೀಶರು ಜಲವನ್ನು ಸಂಗ್ರಹಿಸಿ ಕಳುಹಿಸಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ಉಡುಪಿಯಲ್ಲಿನ ಶ್ರೀ ಕೃಷ್ಣ ದೇವಸ್ಥಾನ, ಚಿಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರಿ ದೇವಸ್ಥಾನ, ತುಮಕೂರಿನ ಸಿದ್ದಗಂಗ ಮಠ ಮತ್ತು ದತ್ತ ಪೀಠ ದೇವಾಲಯಗಳಿಂದ ಮಣ್ಣನ್ನು ಕಳುಹಿಸಲಾಗಿದೆ ಎಂದು ಬಸವರಾಜ್ ಹೇಳಿದ್ದಾರೆ.

- Advertisement -

Latest News

error: Content is protected !!