ಬಾಗಲಕೋಟೆ: ಸಾಮಾನ್ಯವಾಗಿ ಕನಾ೯ಟಕದಲ್ಲಿ ಇಳಕಲ್ ಸೀರೆ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಇಂತಹ ಅಪರೂಪದ ಇಳಕಲ್ ಸೀರೆಯಲ್ಲಿ ಯುವ ನೇಕಾರನೊಬ್ಬ ಅಯೋಧ್ಯೆಯ ರಾಮ ಮಂದಿರ ನೇಯುವ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಬೇಡಿಕೆಯೊಂದನ್ನು ಸಲ್ಲಿಸಿದ್ದಾನೆ.
ಹೌದು, ಉತ್ತರ ಕನಾ೯ಟಕದ ಬಾಗಲಕೋಟೆ ಜಿಲ್ಲೆ ಅಂದರೆ ಸಾಕು ನಮಗೆ ಥಟ್ಟನೆ ನೆನಪಾಗೋದು ಇಲಕಲ್ ಸೀರೆ. ಕನ್ನಡ ನಾಡಿನ ಸಂಪ್ರದಾಯದಲ್ಲಿ ಹಾಸು ಹೊಕ್ಕಾಗಿರುವ ಇಲಕಲ್ ಸೀರೆ ಇಂದಿನ ಆಧುನಿಕತೆಯ ನಾಗಾಲೋಟದಲ್ಲೂ ತನ್ನತನವನ್ನ ಕಳೆದುಕೊಂಡಿಲ್ಲ. ಇವುಗಳ ಮಧ್ಯೆ ಇಲಕಲ್ ಪಟ್ಟಣದ ನೇಕಾರ ಯುವಕ ಮೇಘರಾಜ್ ಇಲಕಲ್ ಸೀರೆಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಚಿತ್ರವನ್ನು ನೇಯ್ದಿದ್ದಾನೆ. ನಿರಂತರ 4 ದಿನಗಳವರೆಗೆ ನೇಯ್ಗೆ ಕಾಯಕದಲ್ಲಿ ನಿರತರಾಗಿದ್ದ ಮೇಘರಾಜ್ ಎಲ್ಲರ ಹುಬ್ಬೇರಿಸುವಂತೆ ಸುಂದರವಾಗಿ ರಾಮ ಮಂದಿರವನ್ನು ನೇಯ್ಗೆ ಮೂಲಕ ಪ್ರದಶಿ೯ಸಿದ್ದಾನೆ.
ಯುವ ನೇಕಾರ ಮೇಘರಾಜ್ ಈಗಾಗಲೇ ಸಾಕಷ್ಟು ಕಲಾಕೃತಿಗಳನ್ನು ಇಲಕಲ್ ಸೀರೆಯಲ್ಲಿ ಬಿಡಿಸಿದ್ದು, ಸಧ್ಯ ಅಯೋಧ್ಯೆಯ ಶ್ರೀರಾಮ ಮಂದಿರ ಬಿಡಿಸಲು ಮುಂದಾಗಿದ್ದಾನೆ. ಆರಂಭದಲ್ಲಿ ಕನ್ನಡ ನಾಡಿನ ಕೆಂಪು ಮತ್ತು ಹಳದಿ ಬಣ್ಣವುಳ್ಳ ನಾಡಧ್ವಜವನ್ನು ರೂಪಿಸಿದರೆ ನಂತರ ಕೇಸರಿ, ಬಿಳಿ, ಹಸಿರು ಕಲರ್ ನಲ್ಲಿ ರಾಷ್ಟ್ರಧ್ವಜ ರೂಪಿಸಿದ್ದಾನೆ. ಇವರೆಡರ ಮಧ್ಯೆ ಅಯೋಧ್ಯೆಯ ರಾಮ ಮಂದಿರವನ್ನು ಹಳದಿ ಮತ್ತು ನೀಲಿ ಕಲರ್ ಬಳಸಿ ನೇಯ್ಗೆಯಲ್ಲಿ ಒಡಮೂಡಿಸಿದ್ದಾನೆ. ತನ್ನ ನಿತ್ಯದ ಕಾಯಕದ ಮಧ್ಯೆ ನಿರಂತರ 4 ದಿನಗಳ ಕಾಲ ಈ ಸಂಭಂದ ನೇಯ್ಗೆ ನೇಯ್ದು ಅಪರೂಪದ ಇಲಕಲ್ ಸೀರೆಯನ್ನು ತಯಾರಿಸಿದ್ದಾನೆ.
ಹೀಗೆ ಇಲಕಲ್ ಸೀರೆಯಲ್ಲಿ ಅಯೋಧ್ಯೆಯ ರಾಮ ಮಂದಿರವನ್ನು ಬಿಡಿಸಿರುವ ನೇಕಾರ ಮೇಘರಾಜ್ ನ ಹಿಂದೆ ಉದ್ದೇಶವೂ ಸಹ ಇದೆ. ಅದೇನೆಂದರೆ ದೇಶದ ಹಿಂದೂಗಳ ಅರಾಧ್ಯ ದೇವನಾಗಿರುವ ಶ್ರೀ ರಾಮನ ಹೆಸರಿನಲ್ಲಿ ಅಯೋಧ್ಯೆಯಲ್ಲಿ ನಿಮಾ೯ಣವಾಗುತ್ತಿರುವ ರಾಮ ಮಂದಿರವೂ ಮುಕ್ತಾಯ ಹಂತ ತಲುಪಿದ್ದು, ಅದು ಮುಗಿಯುತ್ತಲೇ ರಾಮ ಮಂದಿರವನ್ನು ರಾಷ್ಟ್ರ ಮಂದಿರವನ್ನಾಗಿ ಘೋಷಿಸಿಬೇಕೆಂದು ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಮನವಿ ಮಾಡಿದ್ದಾನೆ.