ಕಾಸರಗೋಡು: ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯದಲ್ಲಿ ಎಂಡಿಎಸ್ ವಿಭಾಗದಲ್ಲಿ ಮೊದಲ ರ್ಯಾಂಕಿನೊಂದಿಗೆ ಚಿನ್ನದ ಪದಕದಗಳಿಸಿ ಗಡಿನಾಡು ಕಾಸರಗೋಡು ಜಿಲ್ಲೆಯ ಕುಗ್ರಾಮದಲ್ಲಿ ಬೆಳೆದ ಮುಸ್ಲಿಂ ಸಮುದಾಯದ ಹುಡುಗಿಯೊಬ್ಬಳು ಸಾಧನೆ ಮಾಡಿದ್ದಾಳೆ .
ಕಾಸರಗೋಡು ಜಿಲ್ಲೆಯ ಪೈವಳಿಕೆ ಬಳಿಯ ಕಾಡೂರು ಎಂಬ ಗ್ರಾಮದ ನಿವಾಸಿಯಾಗಿರುವ ಡಾ . ಸೆಕೀಬಾ ಅಲಿ ಕಾಡೂರು ರಾಜೀವ ಗಾಂಧಿ ವಿವಿಯ ಕನ್ಸರ್ವೇಟಿವ್ ಡೆಂಟಿಸ್ಟಿ ಎಂಡ್ ಎಂಡೋಡೋಂಟಿಕ್ಸ್ ವಿಷಯದಲ್ಲಿ ಎಂಡಿಎಸ್ ಪೂರೈಸಿದ್ದು ಮೊದಲ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಮೆಡಿಕಲ್ ಕಾಲೇಜಿನಲ್ಲಿ ಬಿಡಿಎಸ್ ಅಧ್ಯಯನ ನಡೆಸಿದ ಸೆಕೀಬಾ , ಹಾಸನದ ಹಾಸನಾಂಬ ಕಾಲೇಜಿನಲ್ಲಿ ಡೆಂಟಲ್ ಎಂಡಿಎಸ್ ವಿದ್ಯಾರ್ಥಿನಿಯಾಗಿದ್ದರು.
ಈಕೆ ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡೂರಿನ ಮೊಹಮ್ಮದ್ ಅಲಿ ಮತ್ತು ಜೊಹರಾ ಅಲಿ ದಂಪತಿಯ ಪುತ್ರಿ . ಹುಟ್ಟೂರು ಕಾಡೂರಿನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಆರಂಭಿಸಿದ್ದ ಸೆಕೀಬಾ , ಗಡಿಭಾಗದ ಕುರುಡಪದವು ಪ್ರೌಢಶಾಲೆಯಲ್ಲಿ ಹೈಸ್ಕೂಲ್ , ಆನಂತರ ವಿಟ್ಲದ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು .
ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದು ಸರಕಾರಿ ಕೋಟಾದಲ್ಲಿ ಮೆಡಿಕಲ್ ಸೀಟು ಪಡೆದುಕೊಂಡಿದ್ದರು. ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಕನ್ನಡ ಮಾಧ್ಯಮದಲ್ಲಿ ಕಲಿತ ಇವರು ಉನ್ನತ ಮಟ್ಟದ ಸಾಧನೆ ಮಾಡಿದ್ದು ನಿಜಕ್ಕೂ ಶ್ಲಾಘನೀಯ.
ಕರಾವಳಿಯ ಮುಸ್ಲಿಂ ಸಮುದಾಯದ ಹುಡುಗಿಯೊಬ್ಬಳು ವೈದ್ಯಕೀಯ ಕ್ಷೇತ್ರದಲ್ಲಿ ಗೋಲ್ಡ್ ಮೆಡಲ್ ಸಾಧನೆ ಮಾಡಿದ್ದು ಇದೇ ಮೊದಲು ಎನ್ನಲಾಗುತ್ತಿದೆ . ಈಕೆಯ ಸಾಧನೆಗೆ ಹಾಸನಾಂಬ ಕಾಲೇಜಿನ ಪ್ರಾಂಶುಪಾಲರು , ಸಿಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ .