Sunday, May 19, 2024
Homeಕರಾವಳಿಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಂದ ಮತ್ತೆ ರ್‍ಯಾಗಿಂಗ್‌, 6 ವಿದ್ಯಾರ್ಥಿಗಳ ಬಂಧನ

ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಂದ ಮತ್ತೆ ರ್‍ಯಾಗಿಂಗ್‌, 6 ವಿದ್ಯಾರ್ಥಿಗಳ ಬಂಧನ

spot_img
- Advertisement -
- Advertisement -

ಮಂಗಳೂರು: ನಗರದ ಫಳ್ನೀರ್‌ನ ಇಂದಿರಾ ಕಾಲೇಜಿನಲ್ಲಿ ಮತ್ತೊಂದು ರ್‍ಯಾಗಿಂಗ್‌ ಪ್ರಕರಣ ಬೆಳಕಿಗೆ ಬಂದಿದ್ದು, ಕಿರಿಯ ವಿದ್ಯಾರ್ಥಿಯೊಬ್ಬನನ್ನು 6 ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್‌ ಮಾಡಿದ್ದು ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಫಳ್ನೀರ್‌ನ ಇಂದಿರಾ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಲಾಲ್ (20), ಶಾಹಿದ್ (20), ಅಮ್ಜದ್ (20), ಜುರೈಜ್ (20), ಹುಸೈನ್ (20), ಲಿಮ್ಸ್ (20) ಬಂಧಿತರು.

ಪ್ರಕರಣದ ವಿವರ:
ಜು.14ರಂದು ರಾತ್ರಿ 8 ಗಂಟೆಗೆ ನಗರದ ಫಳ್ನೀರ್ ರಸ್ತೆಯ ಹೊಟೇಲ್‌ವೊಂದಕ್ಕೆ ರ್‍ಯಾಗಿಂಗ್‌ಗೆ ಒಳಗಾದ ಸಂತ್ರಸ್ತ ಮ್ಯಾನುಯಲ್ ಬಾಬು (21) ಎಂಬವರು ತನ್ನ ಸ್ನೇಹಿತರಾದ ಜೋಬಿನ್ ಹಾಗೂ ಶಾಕೀರ್ ಅವರ ಜೊತೆಗೆ ಊಟಕ್ಕಾಗಿ ತೆರಳಿದ್ದಾರೆ. ಈ ಸಮಯ ಪರಿಚಯಸ್ಥರಾದ ಇಂದಿರಾ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಲಾಲ್, ಜುರೈಜ್, ರಸೆಲ್ ಅವರ ಪೈಕಿ ಶ್ರೀಲಾಲ್ ಸಂತ್ರಸ್ತ ಮ್ಯಾನುಯಲ್‌ನ್ನು ಉದ್ದೇಶಿಸಿ, ‘ಏನು ಮುಖ ನೋಡುತ್ತಿಯಾ, ನೀವು ಜೂನಿಯರ್‌ಗಳು, ನಾವು ಬರುವಾಗ ಎದ್ದು ನಿಂತು ಗೌರವ ಕೊಡಬೇಕು’ ಎಂದು ರ್‍ಯಾಗಿಂಗ್‌ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಂತರ ರಾತ್ರಿ 10:30ರ ಸುಮಾರಿಗೆ ಅತ್ತಾವರದ ಅಪಾರ್ಟ್‌ಮೆಂಟ್‌ನ ರೂಮಿನಲ್ಲಿ ಮ್ಯಾನುಯಲ್ ಇದ್ದ ಸಂದರ್ಭ ಆರು ಆರೋಪಿಗಳು ಮಾರಕಾಯುಧ ಸಹಿತ ಆಗಮಿಸಿದ್ದಾರೆ. ಏಕಾಏಕಿ ರೂಮನ್ನು ಪ್ರವೇಶಿಸಿದ ಆರೋಪಿಗಳು ಈತನಿಗೆ ಪುನಃ ನಿಂದಿಸಿದ್ದಾರೆ. ಬಳಿಕ ಬಟ್ಟೆಗಳನ್ನು ತೆಗೆದು ಒಳವಸ್ತ್ರದಲ್ಲಿ ನಿಲ್ಲಲು, ಪದೇಪದೇ ಕುಳಿತುಕೊಳ್ಳಲು, ಎದ್ದುನಿಲ್ಲಲು ಹೇಳಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದಿದ್ದಾರೆ. ಅಲ್ಲದೆ, ಆರೋಪಿಗಳು ಜೀವ ಬೆದರಿಕೆಯನ್ನೂ ಒಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡಿದ್ದ ವಿದ್ಯಾರ್ಥಿಗಳು ವೆನ್ಲಾಕ್‌ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಆರೋಪಿಗಳಿಗೆ ಹೆದರಿ ಆಸ್ಪತ್ರೆಯಿಂದ ತೆರಳಿದ್ದರು. ಮನೆಗೆ ಹೋಗಿ ತಿಳಿಸಿದಾಗ, ಪಾಲಕರು ದೂರು ಕೊಡುವಂತೆ ಸಲಹೆ ನೀಡಿದ್ದರು. ಅದರಂತೆ ರ್‍ಯಾಗಿಂಗ್‌ಗೆ ಒಳಗಾದ ವಿದ್ಯಾರ್ಥಿಗಳು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೊಂಡ ತನಿಖಾಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -
spot_img

Latest News

error: Content is protected !!