ಸುಳ್ಯ: ಗುರುವಾರ ಕಂದಾಯ ಸಚಿವ ಆರ್ ಅಶೋಕ್ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಅವರು` ಮಂಗಳೂರಿನ ಸೋಮೇಶ್ವರ, ಉಚ್ಚಿಲ ಬಟ್ಟಪ್ಪಾಡಿ, ಉಳ್ಳಾಲದ ಮೊಗವೀರ ಪಟ್ಣ ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಕಡಲ್ಕೊರೆತ ಪರಿಶೀಲನೆ ನಡೆಸಿರುವ ವಿಚಾರವನ್ನು ಸಚಿವ ಅಶೋಕ್ ತನ್ನ ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡುವಾಗ ಎಡವಟ್ಟು ಮಾಡಿಕೊಂಡಿದ್ದು, ಉಳ್ಳಾಲದ ಬದಲಿಗೆ ಸುಳ್ಯ ಎಂದು ಬರೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕಡಲ್ಕೊರೆತ ಆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿ, ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು ಎಂದು ಅಶೋಕ್ ತನ್ನ ಇನ್ಸ್ಟಾ ಗ್ರಾಮ್ ನಲ್ಲಿ ಬರೆದು ಕೊಂಡಿದ್ದರು. ಸದ್ಯ ಸಚಿವರ ಈ ಪೋಸ್ಟ್ ಕೆಲವು ನೆಟ್ಟಿಗರ ವ್ಯಂಗ್ಯ ಪ್ರಶ್ನೆಗಳ ಮೂಲಕ ಟ್ರೋಲ್ ಗೆ ಗುರಿಯಾಗಿದೆ.
‘ಸುಳ್ಯದಲ್ಲಿ ಹೊಸ ಸಮುದ್ರ ಕಂಡು ಹಿಡಿದ ಕಂದಾಯ ಇಲಾಖೆ ಅಂತ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದರೆ, ಇನ್ನೊಬ್ಬರು ಸುಳ್ಯಕ್ಕೆ ಹೊಸ ಸಮುದ್ರ ಕಂಡು ಹಿಡಿದ ಕಂದಾಯ ಸಚಿವ ಅಂತ ಬರೆದುಕೊಂಡಿದ್ದಾರೆ. ಇನ್ನು ಇದರ ಸ್ಕ್ರೀನ್ ಶಾಟ್ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ತೀವ್ರ ಟೀಕೆಗಳು ವ್ಯಕ್ತವಾಗಿದೆ.