ಪುತ್ತೂರು: ಪಡೀಲ್ ನಲ್ಲಿ ಭೀಕರ ಅಪಘಾತ ಸಂಭವಿಸಿ ಯುವಕ ಸಾವನ್ನಪ್ಪಿದ ಘಟನೆ ನಡೆದದೆ. ಬೆಳ್ಳಿಪ್ಪಾಡಿ ಕೊಡಿರದ ವಿಶ್ವನಾಥ ಪೂಜಾರಿ ಅವರ ಪುತ್ರ ಧನರಾಜ್(21) ಮೃತ ಯುವಕ.
ಧನರಾಜ್ ಸ್ನೇಹಿತರ ಜೊತೆ ಪುತ್ತೂರು ಜಾತ್ರೆ ಹಿನ್ನೆಲೆ ಗದ್ದೆಯಲ್ಲಿ ಆಹಾರ ಮಳಿಗೆ ಹಾಕಿದ್ದರು. ಹಾಗಾಗಿ ನಿನ್ನೆ ಮುರ ಸಮೀಪದಲ್ಲಿರುವ ಸ್ನೇಹಿತನ ಮನೆಯಲ್ಲಿ ತಂಗಿದ್ದರು. ಬೆಳಗ್ಗೆ ಬಟ್ಟೆ ಬದಲಾಯಿಸಿ ಸ್ಟಾಲ್ ಗೆ ಬರುವಾಗ ಅಪಘಾತವಾಗಿದೆ. ಧನರಾಜ್ ಬೈಕ್ ಡಿವೈಡರ್ ಏರಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಇನ್ನೊಂದು ಬೈಕ್ ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಧನ್ ರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮೃತರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.
ಇನ್ನೊಂದು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ಧಾವಿಸಿ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.


