ಬೆಳಗಾವಿ : ಸಿಆರ್‌ಪಿಎಪ್ ಕೋಬ್ರಾ ಪಡೆಯ ಯೋಧ ಸಚಿನ್ ಸಾವಂತ್ ಮೇಲೆ ದಬ್ಬಾಳಿಕೆ ತೋರಿದ್ದಾರೆ ಎಂಬ ಆರೋಪದ ಮೇಲೆ ಚಿಕ್ಕೋಡಿ ತಾಲೂಕಿನ ಸದಲಗಾ ಠಾಣೆಯ ಪಿಎಸ್‌ಐ ಅನಿಲ್ ಕುಂಬಾರ್ ಇಂದು ಅಮಾನತಾಗಿದ್ದಾರೆ.
ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ ಈ ಪ್ರಕರಣದ ಬಗ್ಗೆ ಸದಲಗಾ ಪೊಲೀಸರ ವರ್ತನೆ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡದ್ದಕ್ಕೆ ಹಾಗೂ ಕರ್ತವ್ಯ ಲೋಪ ಆರೋಪದಡಿ ಪಿಎಸ್‌ಐ ಅವರನ್ನು ಅಮಾನತು ಮಾಡಲಾಗಿದೆ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ತಿಳಿಸಿದ್ದಾರೆ.
ಯೋಧ ಸಚಿನ್ ಬಿಡುಗಡೆಯಾದ ಬಳಿಕ ಆತನಿಂದ ಹೇಳಿಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಪಿಎಸ್‌ಐ ಅನಿಲ್ ಕುಂಬಾರ್ ಕರ್ತವ್ಯ ಲೋಪ ಕಂಡು ಬಂದಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಘಟನೆ ನಡೆದ ದಿನವೇ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ ಮರುದಿನ ಪತ್ರ ರವಾನಿಸಲಾಗಿತ್ತು. ತನಿಖೆ ಮುಂದುವರೆದಿದ್ದು ಪೇದೆಗಳನ್ನು ವಿಚಾರಣೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಏ. 23ರಂದು ಯೋಧನನ್ನು ಚೈನಿನಲ್ಲಿ ಕಟ್ಟಿಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಬ್‌ಇನ್ಸ್‌ಪೆಕ್ಟರ್ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.