ಉಳ್ಳಾಲ: ಮೀನುಗಾರಿಕಾ ದೋಣಿಯಿಂದ ಆಯತಪ್ಪಿ ಬಿದ್ದ ಮೀನುಗಾರನನ್ನು ಐವರ ತಂಡ ರಕ್ಷಿಸಿರುವ ಘಟನೆ ಉಳ್ಳಾಲ ಅಳಿವೆಬಾಗಿಲು ಸಮೀಪ ಇಂದು ನಡೆದಿದೆ.
ರಕ್ಷಣೆಗೊಳಗಾದವರನ್ನು ಬೆಂಗ್ರೆ ನಿವಾಸಿ ನವಾಝ್ (35) ಎಂದು ಗುರುತಿಸಲಾಗಿದೆ. ಓಷಿಯನ್ ಬ್ರೀಝ್ ದೋಣಿಯಲ್ಲಿದ್ದ ಉಳಿಯ ನಿವಾಸಿ ಪ್ರೇಮ್ ಪ್ರಕಾಶ್ ಡಿಸೋಜ, ಅನಿಲ್ ಮೊಂತೇರೊ, ಸೂರ್ಯ ಪ್ರಕಾಶ್ ಡಿಸೋಜ ಹಾಗೂ ಬೆಂಗ್ರೆ ನಿವಾಸಿ ರಿತೇಶ್ ಮತ್ತು ಅಜಿತ್ ಎಂಬವರು ರಕ್ಷಿಸಿದವರಾಗಿದ್ದಾರೆ.
ಶುಕ್ರವಾರ ಬೆಳಿಗ್ಗೆ ನಾಡದೋಣಿ ಮೀನುಗಾರಿಕೆಯವರು ಸಮುದ್ರದಲ್ಲಿ ಬಲೆ ಹಾಕಿ ವಾಪಸ್ಸಾಗಿದ್ದರು. ಏಡಿ ಸಿಗುವ ಸಮಯವಾಗಿದ್ದರಿಂದಾಗಿ ಬಲೆ ಹಾಕಲಾಗಿತ್ತು. ಶನಿವಾರ ಬೆಳಿಗ್ಗೆ ಬಹುತೇಕ ದೋಣಿಯವರು ಹಾಕಿರುವ ಬಲೆಯನ್ನು ತೆಗೆಯಲು ಸಮುದ್ರಕ್ಕೆ ತೆರಳಿದ್ದು, ಭಾರಿ ಗಾಳಿ ಬೀಸುತ್ತಿದ್ದ ಹಿನ್ನೆಲೆಯಲ್ಲಿ ಹಲವು ದೋಣಿಗಳು ತೆರಳದೇ ಉಳಿದಿದ್ದವು. ಆದರೆ, ಹೋದಂತಹ ದೋಣಿಯೊಂದು ಬಲೆ ತೆಗೆದು ವಾಪಸಾಗುವಾಗ ಅಳಿವೆಬಾಗಿಲು ಸಮೀಪ ಕಲ್ಲುಗಳ ಮಧ್ಯೆಯಿಂದ ಒಳಬರುವ ಸಂದರ್ಭ ಎಂಜಿನ್ ನಿಷ್ಕ್ರಿಯಗೊಂಡಿದೆ. ಇದೇ ಸಂದರ್ಭ ಭಾರೀ ಗಾಳಿಯೊಂದು ಅಪ್ಪಳಿಸಿದಾಗ ಮೀನುಗಾರಿಕಾ ದೋಣಿಯಲ್ಲಿದ್ದ ನವಾಝ್ ಎಂಬವರು ಸಮುದ್ರಕ್ಕೆ ಬಿದ್ದಿದ್ದಾರೆ. ಆದರೆ, ಅಲೆಗಳ ಅಪ್ಪಳಿಸುವಿಕೆಗೆ ದೋಣಿ ನಿಲ್ಲಿಸಲಾಗದೆ ಮೀನುಗಾರರು ಸಮುದ್ರಕ್ಕೆ ಬಿದ್ದವನ ರಕ್ಷಣೆಗೆ ಥರ್ಮಕೋಲ್ ಎಸೆದಿದ್ದಾರೆ.
ಇದೇ ಸಂದರ್ಭ ಓಷಿಯನ್ ಬ್ರೀಝ್ ಅನ್ನುವ ದೋಣಿಯೂ ಬಲೆ ತೆಗೆದು ವಾಪಸಾಗುವ ಸಂದರ್ಭ ಮಾಲೀಕರು ಮೀನುಗಾರನೊಬ್ಬ ಸಮುದ್ರಕ್ಕೆ ಬಿದ್ದಿರುವ ಮಾಹಿತಿ ನೀಡಿದ್ದರು. ಅದಕ್ಕಾಗಿ ಅರ್ಧ ಗಂಟೆಯ ಕಾಲ ಸಮುದ್ರದಲ್ಲೇ ಉಳಿದು ಹುಡುಕಾಡಿದ ತಂಡಕ್ಕೆ ನವಾಝ್ ದೂರದಲ್ಲಿ ಥರ್ಮಕೋಲ್ ಹಿಡಿದು ರಕ್ಷಣೆಗೆ ಮೊರೆ ಇಡುತ್ತಿರುವುದನ್ನು ಕಂಡರು. ಆದರೆ, ಭಾರೀ ಗಾಳಿಗೆ ನವಾಝ್ ಇದ್ದ ಕಡೆಗೆ ದೋಣಿ ತೆರಳಲು ಸಾಧ್ಯವಾಗಲಿಲ್ಲ. ಆದರೂ ಧೈರ್ಯ ಮಾಡಿ ನವಾಝ್ ಬಳಿಗೆ ತೆರಳಿದ ತಂಡ ಹಗ್ಗ ಎಸೆದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.