ಮಂಗಳೂರು: ರಾಜ್ಯ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ ಕೊವಿಂದ್ ಅವರು ಶೃಂಗೇರಿಯ ಶ್ರೀ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲ, ಅ.7ರಂದು ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದು ಹಾಗೂ ಆ.8ರ ಸಂಜೆ ಮಂಗಳೂರಿನಿಂದ ನವದೆಹಲಿಗೆ ತೆರಳಲಿರುವ ಹಿನ್ನಲೆಯಲ್ಲಿ ವಸತಿ, ಊಟೋಪಚಾರ ಹಾಗೂ ಬಂದೋಬಸ್ತ್ ಗೆ ಸಂಬಂಧಿಸಿದ ಅಂತಿಮ ಹಂತದ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಷ್ಟ್ರಪತಿಗಳು ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿರುವ ಹಿನ್ನಲೆಯಲ್ಲಿ ಅಂತಿಮ ಹಂತದಲ್ಲಿ ಕೈಗೊಳ್ಳಬೇಕಾದ ಸಿದ್ದತೆಗಳು ಹಾಗೂ ಎಚ್ಚರಿಕಾ ಕ್ರಮಗಳ ಕುರಿತು ಅ.5ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಕ್ಟೋಬರ್ 7 ಮತ್ತು 8ರಂದು ರಾಮನಾಥ್ ಕೋವಿಂದ್ ಮಂಗಳೂರಿನ ಸರ್ಕ್ಯುಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅವರೊಂದಿಗೆ ಆಗಮಿಸಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಉತ್ತಮ ವಾಸ್ತವ್ಯ, ಊಟೋಪಚಾರವನ್ನು ಒದಗಿಸುವ ಜವಬ್ದಾರಿ ಜಿಲ್ಲಾಡಳಿತಕ್ಕೆ ಒದಗಿಬಂದಿದೆ, ರಾಷ್ಟ್ರದ ಪ್ರಥಮ ಪ್ರಜೆಯ ವಾಸ್ತವ್ಯಕ್ಕೆ ಯಾವುದೊಂದು ಸಣ್ಣಪುಟ್ಟ ಲೋಪವಾಗದಂತೆಯೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಅತ್ಯುತ್ತಮವಾದ ರೀತಿಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿಕೊಡಬೇಕು ಎಂದರು.
ಸರ್ಕ್ಯುಟ್ ಹೌಸ್‌ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಗುತ್ತಿದ್ದು, ಕಟ್ಟಡಕ್ಕೆ ಸುಣ್ಣ-ಬಣ್ಣ ಮಾಡಿ ತಯಾರಿ ಮಾಡಲಾಗುತ್ತಿದೆ. ಸರ್ಕ್ಯುಟ್ ಹೌಸ್‌ನಲ್ಲಿ ಸಂಪರ್ಕಿಸುವ ಕದ್ರಿ ಪಾರ್ಕ್, ಕೆಪಿಟಿ ರಸ್ತೆಯನ್ನು ದುರಸ್ತಿ ಮಾಡಲಾಗಿದೆ.ಅಲ್ಲದೆ ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾಷ್ಟ್ರಪತಿಗಳು ಮಂಗಳೂರಿನ ಸರ್ಕ್ಯುಟ್ ಹೌಸ್‌ಗೆ ಆಗಮಿಸಲಿದ್ದು, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲಾಗಿದೆ. ಅವೈಜ್ಞಾನಿಕ ಹಂಪ್‌ಗಳನ್ನು ತೆರವುಗೊಳಿಸಲಾಗಿದೆ.
ರಾಷ್ಟ್ರಪತಿಗಳ ವಾಸ್ತವ್ಯದ ವೇಳೆ ನಿಯೋಜಿಸಲಾಗಿರುವ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಆರ್ ಟಿಪಿಸಿಆರ್ ತಪಾಸಣೆ ಆಗಬೇಕು ಹಾಗೂ ಆದ್ಯತೆ ಮೇರೆಗೆ ಅವರ ವರದಿಗಳನ್ನು ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು, ಮೆಸ್ಕಾಂ ನಿಂದ ವಿದ್ಯುತ್ ಕಡಿತವಾಗಬಾರದು, ಬಿಎಸ್‍ಎನ್‍ಎಲ್‍ನಿಂದ ಹಾಟ್‍ಲೈನ್ ಎಳೆಯುವುದುನ್ನು ಕೂಡಲೇ ಪೂರ್ಣಗೊಳಿಸಬೇಕು ಹಾಗೂ ರಾಷ್ಟ್ರಪತಿಗಳ ಕರ್ತವ್ಯಕ್ಕೆ ನಿಯೋಜಿಸಲಾದ ಲೈಸನಿಂಗ್ ಅಧಿಕಾರಿಗಳು ಶಿಷ್ಟಾಚಾರದಂತೆಯೇ ವರ್ತಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಅವರು ನೀಡಿದರು.ರಾಷ್ಟ್ರಪತಿಗಳ ಪ್ರವಾಸದಲ್ಲಿ ರಾಜ್ಯಪಾಲರು ಕೂಡ ಭಾಗವಹಿಸುತ್ತಿದ್ದಾರೆ, ಈ ದಿಸೆಯಲ್ಲಿ ಅವರ ವಾಸ್ತವ್ಯಕ್ಕೂ ಕಾಳಜಿ ನೀಡಬೇಕಿದೆ, ಸಂಬಂಧಿಸಿದ ಅಧಿಕಾರಿಗಳು ಜಾಗೃತರಾಗಿರಬೇಕು ಎಂದರು.
ಸರ್ಕ್ಯುಟ್ ಹೌಸ್ ರಸ್ತೆ, ಪ್ರವೇಶ ದ್ವಾರ, ಅಕ್ಕಪಕ್ಕದ ಜಾಗವನ್ನು ಸ್ವಚ್ಚಗೊಳಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕದ್ರಿ ಪಾರ್ಕ್ ರಸ್ತೆ ಅಭಿವೃದ್ಧಿ ನಡೆಯುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಅದನ್ನು ತಕ್ಷಣ ಪೂರ್ಣಗೊಳಿಸಿ ಎಂದು ಸೂಚನೆ ಕೊಡಲಾಗಿದೆ. ಸರ್ಕ್ಯುಟ್ ಹೌಸ್‌ನಲ್ಲಿ ರಾಷ್ಟ್ರಪತಿಗಳು ವಾಸ್ತವ್ಯ ಹೂಡುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಮಾಣಿಕ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಯಶವಂತ್, ಸಹಾಯಕ ಕಮಾಂಡರ್ ಸಾಮ್ರಾಟ್, ಮಂಗಳೂರು ಏರ್‍ಪೋರ್ಟ್ ಅಧಿಕಾರಿ ಶ್ರೀಕಾಂತ್ ಟಾಟಾ, ಸಹಾಯಕ ಆಯುಕ್ತ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿದ್ದರು.