ಮಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಅ. 7, 8ರಂದು ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿದ್ದು, ಭದ್ರತೆ ಸೇರಿದಂತೆ ಅಗತ್ಯ ಸಿದ್ಧತೆಗಳು ಆರಂಭಗೊಂಡಿವೆ.
ಬುಧವಾರ ಜಿಲ್ಲಾಡಳಿತದೊಂದಿಗೆ ಬೆಂಗಳೂರಿನಿಂದ ಏರ್ಪಡಿಸಲಾಗಿದ್ದ ವೀಡಿಯೋ ಸಂವಾದದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಅವರಿಗೆ ಪೂರ್ವಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾಹಿತಿ ನೀಡಿದರು.
ರಾಷ್ಟ್ರಪತಿ ಭವನದ ನಿರ್ದೇಶನ ಹಾಗೂ ಶಿಷ್ಟಾಚಾರದಂತೆ ವಾಸ್ತವ್ಯ, ಊಟೋಪಚಾರ ಹಾಗೂ ಜತೆಗೆ ಆಗಮಿಸುವ ಅಧಿಕಾರಿಗಳು, ಸಿಬಂದಿಗೆ ವಸತಿ, ಊಟೋಪಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುವುದು. ಆಯಂಬುಲೆನ್ಸ್, ವೈದ್ಯರ ತಂಡ ಸಿದ್ಧವಿದೆ ಹಾಗೂ ಸಂಪರ್ಕ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ಮುಖ್ಯವಾಗಿ ಕೋವಿಡ್ ನಿಯಮಾವಳಿ ಅನ್ವಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ಮೆಸ್ಕಾಂನಿಂದ ವಿದ್ಯುತ್ ಕಡಿತವಾಗದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.
ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಡಿಸಿಪಿ ಹರಿರಾಮ್ ಶಂಕರ್,ಮೆಸ್ಕಾಂ ಎಂಡಿ ಪ್ರಶಾಂತ್ ಮಿಶ್ರ, ಎಸಿ ಮದನಮೋಹನ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಯಶವಂತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.