ಮಂಗಳೂರು: ನಗರದ ಪಕ್ಷಿಕೆರೆಯಲ್ಲಿರುವ ಪೇಪರ್ ಸೀಡ್ ಸಂಸ್ಥೆ ಪರಿಸರಕ್ಕೆ ಪೂರಕವಾದ ಸಾಮಗ್ರಿಗಳನ್ನು ತಯಾರಿಸುವುದರಲ್ಲಿ ಪ್ರಖ್ಯಾತಿ ಪಡೆದಿದೆ. ಈ ಹಿಂದೆ ಪರಿಸರ ಸ್ನೇಹಿ ಮಾಸ್ಕ್, ಪೇಪರ್ ಪಲ್ಪ್‌ನಿಂದ ಗೊಂಬೆ, ತರಕಾರಿ-ಹೂ ಬೀಜಗಳಿಂದ ರಾಖಿ ತಯಾರಿಸಿ ಗ್ರಾಹಕರ ಮನಗೆದ್ದಿರುವ ಅವರು, ಈ ಬಾರಿ ಅಡಿಕೆ ಹಾಳೆಯಲ್ಲಿ ರಾಖಿ ತಯಾರಿಸಿದ್ದಾರೆ.

ಈ ಹಿಂದೆ ಪೇಪರ್ ಬಳಸಿ ರಾಖಿ ತಯಾರಿಸುತ್ತಿದ್ದರು. ಆದರೆ ರಕ್ಷಾ ಬಂಧನ ಮಳೆಗಾಲದಲ್ಲಿ ಬರುವುದರಿಂದ ಅದು ಒದ್ದೆಯಾಗುತ್ತದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಅಡಿಕೆ ಮರದ ಹಾಳೆಯಲ್ಲಿ ತಯಾರಿಸಿದ್ದಾರೆ.
ಈ ಅಡಿಕೆ ಹಾಳೆಯಿಂದ ತಯಾರಿಸಲಾದ ರಾಖಿಯ ಒಳಭಾಗದಲ್ಲಿ ಟೊಮ್ಯಾಟೊ, ಬದನೆ, ತುಳಸಿ ಗಿಡಗಳ ಬೀಜಗಳನ್ನು ಹಾಕಲಾಗಿದೆ. ರಾಖಿ ಬಳಕೆಯ ಬಳಿಕ ತೊಟ್ಟಿಗೆ ಹಾಕಿದರೆ ಅದು ಗಿಡವಾಗಿ ಬೆಳೆಯಲಿದೆ. ಈ ರಾಖಿಗೆ ರೂ 35 ದರ ವಿಧಿಸಲಾಗಿದ್ದು, ಆನ್‌ಲೈನ್ ಮೂಲಕ ಮಾರಾಟ ಪ್ರಕ್ರಿಯೆ ನಡೆಸಲಾಗುತ್ತದೆ.
ವಿವಿಧ ಹಬ್ಬ ಮತ್ತು ವಿಶೇಷ ದಿನಗಳ ಸಂದರ್ಭದಲ್ಲಿ ಉಪಯೋಗಿಸಲಾಗುವ ಉತ್ಪನ್ನಗಳನ್ನು ಪರಿಸರ ಸ್ನೇಹಿ ರೂಪ ಕೊಟ್ಟು ಆ ಮೂಲಕ ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ನಿತಿನ್ ವಾಸ್ ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ. ಇದೀಗ ರಕ್ಷಾ ಬಂಧನಕ್ಕೆ ಪರಿಸರ ಪೂರಕ ಉತ್ಪನ್ನ ತಯಾರಿಸಿ ಶಾಘನೆಗೆ ಪಾತ್ರರಾಗಿದ್ದಾರೆ.

ನಿತಿನ್‌ವಾಸ್ ಅವರು ಪರಿಸರಕ್ಕೆ ಪೂರಕವಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತಾರೆ. ಇತ್ತೀಚಿಗೆ ಅವರ ಪೇಪರ್ ಸೀಡ್ ಸಂಸ್ಥೆಯಿಂದ ತಯಾರಿಸಲಾದ ಗಿಡವಾಗಿ ಬೆಳೆಯುವ ಮಾಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯಾಗಿತ್ತು. ಇದೀಗ ಇವರು ರಕ್ಷಾ ಬಂಧನ ದಿನಕ್ಕಾಗಿ ವಿಶೇಷ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.