ಬೆಂಗಳೂರು: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸಾಧನೆಗೈದ ಕರ್ನಾಟಕದ ತಾರಾ ಅಥ್ಲೀಟ್ ಎಂ.ಆರ್. ಪೂವಮ್ಮ ಅವರು ಮುಖ್ಯಮಂತ್ರಿ ಡಿಕೆಶಿಯವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು. ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಉತ್ತಮ ಭರವಸೆ ಸಿಕ್ಕಿದೆ. ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ ಯಾವ ರೀತಿಯ ಧನಾತ್ಮಕ ವೈಬ್ಸ್ ಇತ್ತೋ, ಅದೇ ರೀತಿಯ ವೈಬ್ಸ್ ನಮಗೆ ಸಿಎಂ ಅವರಿಂದಲೂ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಕೂಡ ಸ್ವತಃ ಕ್ರೀಡಾಪಟುವಾಗಿದ್ದರಿಂದ ನಮ್ಮ ಶ್ರಮ ಹಾಗೂ ಭಾವನೆಗಳು ಅವರಿಗೆ ಚೆನ್ನಾಗಿ ಅರ್ಥವಾಗುತ್ತವೆ. ರಾಜ್ಯ ಸರ್ಕಾರವು ಕ್ರೀಡಾಪಟುಗಳ ಬಹುಮಾನ ಮೊತ್ತವನ್ನು ಹೆಚ್ಚಿಸಿರುವುದು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಿರುವುದು ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಉತ್ತೇಜನ ನೀಡಿದೆ. ನಾವು ಜಪಾನ್‌ನಲ್ಲಿದ್ದಾಗ ತಕ್ಷಣಕ್ಕೆ ವಿಶ್ ಮಾಡಲಿಲ್ಲವಲ್ಲ ಎಂಬ ಭಾವನೆ ಇತ್ತು. ಆದರೆ ಭಾರತಕ್ಕೆ ಮರಳಿ ದೆಹಲಿಗೆ ಲ್ಯಾಂಡ್ ಆದ ತಕ್ಷಣವೇ ಮುಖ್ಯಮಂತ್ರಿಗಳಿಂದ ಅಭಿನಂದನೆ ಬಂದಿತ್ತು ಎಂದು ಪೂವಮ್ಮ ತಿಳಿಸಿದರು.


