ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಶಾಂತಿಗುಡ್ಡೆ ಬಳಿಯ ಕಾಡುಮನೆ ನಿವಾಸಿಯಾಗಿದ್ದ 82 ವರ್ಷದ ಅಣ್ಣು ಪೂಜಾರಿ ಎಂಬವರು ಅಕ್ಟೋಬರ್ 1 ರಂದು ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದರು. ಅವರು ನಾಪತ್ತೆಯಾದಗಿನಿಂದ ನಿರಂತರವಾಗಿ ಅವರ ಮನೆಯವರೂ ಹುಡುಕಾಟ ನಡೆಸಿದ್ದರು. ದೂರು ಕೂಡ ದಾಖಲಿಸಿದ್ದರು. ಇದಾದ ಮೂರು ದಿನಗಳ ಬಳಿಕ ಅಂದ್ರೆ ಅಕ್ಟೋಬರ್ 4ರ ಸಂಜೆ ಕುದುರೆ ಮುಖ ಅರಣ್ಯ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ.

ಮಿತ್ತಬಾಗಿಲು ಗ್ರಾ.ಪಂ. ಉಪಾಧ್ಯಕ್ಷ ವಿನಯಚಂದ್ರ, ಮಾಜಿ ಸದಸ್ಯ ವಿಜಯ ಗೌಡ ಸ್ಥಳೀಯರಾದ ಸಂದೀಪ್ ಪೂಜಾರಿ, ಸುರೇಂದ್ರ ಪೂಜಾರಿ, ತಿಮ್ಮಪ್ಪ ಪೂಜಾರಿ, ಸುಧಾಕರ್ ಸೇರಿದಂತೆ 60ಕ್ಕೂ ಅಧಿಕ ಯುವಕರು ಅರಣ್ಯಾಧಿಕಾರಿಗಳ ಅನುಮತಿಯಂತೆ 7 ತಂಡಗಳಾಗಿ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದು, ಮನೆಯಿಂದ 10 ಕಿ.ಮೀ. ದೂರದ ಕಾಡುಮನೆ ಕುಕ್ಕಾಡಿಯಲ್ಲಿ ಕಲ್ಲಿನ ಮೇಲೆ ಕುಳಿತಿದ್ದರು.
ಅವರು ಮೂರು ದಿನಗಳ ಕಾಲ ನೀರು ಕುಡಿದು ದಿನ ಕಳೆದಿದ್ದರು ಎಂದವರ ಪುತ್ರಿ ವನಿತಾ ಉಮೇಶ್ ತಿಳಿಸಿದ್ದಾರೆ. ಅಣ್ಣು ಪೂಜಾರಿ ಅವರಿಗೆ ನಾಲ್ವರು ಪುತ್ರಿಯರು. ವಯೋ ಸಹಜ ಮರೆವಿನ ಕಾಯಿಲೆ ಹೆಚ್ಚಾಗಿದ್ದರಿಂದ ಕಾಡಿಗೆ ತೆರಳಿದವರಿಗೆ ಮನೆ ರಸ್ತೆ ಸಿಗದೆ ಕಾಡಿನಲ್ಲೆ ಉಳಿದಿದ್ದರು.


