ಮಂಗಳೂರು: ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ(ಬಿಎನ್‌ಎಚ್‌ಎಸ್) ಎನ್ನುವ ಸಂಸ್ಥೆಯು ಮಂಗಳೂರಿನ ಪ್ರಸಿದ್ಧ ಪಿಲಿಕುಳ ಜೈವಿಕ ಉದ್ಯಾನದಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ ಹಾಗೆಯೇ ಸ್ಥಳವನ್ನು ಸರಿಯಾಗಿಲ್ಲ ನಿರ್ವಹಿಸದೇ ಇರುವ ಕಾರಣದಿಂದ ಅಲ್ಲಿರುವ ಪ್ರಾಣಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದೆ.
ಬಿಎನ್‌ಎಚ್‌ಎಸ್ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ನಲ್ಲಿ ಈ ಅರ್ಜಿ ಇತ್ಯರ್ಥಗೊಳ್ಳುವವರೆಗೆ ಪಿಲಿಕುಳ ಜೈವಿಕ ಉದ್ಯಾನವನವನ್ನು ಮುಚ್ಚಬೇಕು ಎಂದು ಕೋರಲಾಗಿದೆ.
ಮಂಗಳೂರಿನ ವನ್ಯಜೀವಿ ಸಂರಕ್ಷಣಾಸಕ್ತ ಭುವನ್ ಹಾಗೂ ಹೈಕೋರ್ಟ್ ವಕೀಲ ಅಶ್ವಿನ್ ಜಾಯ್‌ಸ್ಟನ್ ಕುಟಿನ್ಹ ಎಂಬವರು ಪಿಲಿಕುಳದ ಜೈವಿಕ ಉದ್ಯಾನವನದ ಬಗ್ಗೆ ಅಲ್ಲಿಗೆ ಭೇಟಿ ನೀಡಿ ಕಳೆದ ಅಕ್ಟೋಬರ್ 31ರಂದು ಸ್ವತಂತ್ರವಾಗಿ ಅಧ್ಯಯನ ನಡೆಸಿದ್ದರು. ಅವರ ಅಧ್ಯಯನದ ಸಂದರ್ಭದಲ್ಲಿ ಕೆಲವು ವಿಚಾರಗಳ ಬಗ್ಗೆ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿ ಕೇಳಿದರೂ ಸೂಕ್ತ ಮಾಹಿತಿ ಸಿಗದೇ ಇರುವುದರಿಂದ ಈ ವರದಿಯನ್ನು ಕೇಂದ್ರ ಮೃಗಾಲಯ ಪ್ರಾಧಿಕಾರ, ಮುಖ್ಯ ವನ್ಯಜೀವಿ ವಾರ್ಡನ್, ಅರಣ್ಯ ಇಲಾಖೆ ಪ್ರಧಾನ ಸಂರಕ್ಷಣಾಧಿಕಾರಿಯವರಿಗೆ ಸಲ್ಲಿಸಲಾಗಿದೆ.
ಇನ್ನು ಈ ವ್ಯವಸ್ಥೆಯ ಬಗ್ಗೆ ಪ್ರಾಧಿಕಾರದವರಿಗೆ ವರದಿಗಳನ್ನು ಸಲ್ಲಿಸಿದ್ದರು ಸುಧಾರಣೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಲಾಗಿದೆ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.


