Friday, September 25, 2026
Homeಕರಾವಳಿಮಂಗಳೂರು1000 ಚ.ಮೀ.ವರೆಗಿನ ಏಕ ನಿವೇಶನ ಲೇಔಟ್ ಅನುಮೋದನೆ ಪಿಡಿಒಗಳಿಗೆ: ಸರ್ಕಾರದ ಕ್ರಮ ಸ್ವಾಗತಿಸಿದ ರಕ್ಷಿತ್ ಶಿವರಾಂ

1000 ಚ.ಮೀ.ವರೆಗಿನ ಏಕ ನಿವೇಶನ ಲೇಔಟ್ ಅನುಮೋದನೆ ಪಿಡಿಒಗಳಿಗೆ: ಸರ್ಕಾರದ ಕ್ರಮ ಸ್ವಾಗತಿಸಿದ ರಕ್ಷಿತ್ ಶಿವರಾಂ

- Advertisement -
- Advertisement -

ಬೆಳ್ತಂಗಡಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1000 ಚದರ ಮೀಟರ್‌ವರೆಗಿನ (25 ಸೆಂಟ್ಸ್) ಏಕ ನಿವೇಶನ ಲೇಔಟ್ ಪ್ಲಾನ್‌ಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ವಹಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸ್ವಾಗತಿಸಿದ್ದಾರೆ.

ಸಣ್ಣ ಪ್ರಮಾಣದ ನಿವೇಶನ ಹೊಂದಿರುವ ಗ್ರಾಮೀಣ ಭಾಗದ ಜನರು ಮನೆ ನಿರ್ಮಾಣದ ಅನುಮೋದನೆಗಾಗಿ ವಿವಿಧ ಕಚೇರಿಗಳಿಗೆ ಅಲೆದಾಡಿ ಸಮಯ ಮತ್ತು ಹಣ ವ್ಯಯಿಸಬೇಕಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಿ ಸ್ಥಳೀಯ ಮಟ್ಟದಲ್ಲೇ ತ್ವರಿತ ಸೇವೆ ಒದಗಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಇದೀಗ ಸರ್ಕಾರ ಸ್ಪಂದಿಸಿ, ಅಧಿಕಾರವನ್ನು ಪಿಡಿಒಗಳಿಗೆ ವಹಿಸಿರುವುದು ಅತ್ಯಂತ ಜನಪರ ಕ್ರಮವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ಸಾಮಾನ್ಯ ಜನರು ಹಿರಿಯ ಅಧಿಕಾರಿಗಳ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ತಪ್ಪಲಿದೆ. ಕಡತಗಳ ವಿಲೇವಾರಿ ವೇಗವಾಗಿ ನಡೆಯುವುದರಿಂದ ಮನೆ ನಿರ್ಮಾಣದ ಕನಸು ಹೊಂದಿರುವ ಅನೇಕ ಕುಟುಂಬಗಳಿಗೆ ಅನುಕೂಲವಾಗಲಿದೆ. ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗುವುದರ ಜೊತೆಗೆ, ಸಾರ್ವಜನಿಕರ ಸಮಯ ಮತ್ತು ಹಣವೂ ಉಳಿತಾಯವಾಗಲಿದೆ.

ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ಆಡಳಿತವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಜನರ ಕಷ್ಟಕ್ಕೆ ಸ್ಪಂದಿಸಿ ಮನವಿಯನ್ನು ಈಡೇರಿಸಿದ ರಾಜ್ಯ ಸರ್ಕಾರಕ್ಕೆ ರಕ್ಷಿತ್ ಶಿವರಾಂ ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!