ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬೋಳಿಯಾರ್ ನಿವಾಸಿ ಸುರೇಂದ್ರನ್ ನಾಯರ್ ಮತ್ತು ಸಿಂಧೂದೇವಿ ದಂಪತಿ ಏಕೈಕ ಪುತ್ರಿ ಆಕಾಂಕ್ಷ ಎಸ್ ನಾಯರ್ ಅವರು ಪಂಜಾಬ್ ನಲ್ಲಿ ಅಸಹಜವಾಗಿ ಮೃತಪಟ್ಟ ಘಟನೆಗೆ ಮೇ.17 ಕ್ಕೆ (ಇಂದಿಗೆ) ಒಂದು ವರ್ಷ ತುಂಬುತ್ತಿದೆ. ಮಗಳ ಸಾವಿಗೆ ನಿಖರ ಕಾರಣವೇನು ಎಂಬುದಾಗಿ ಹೆತ್ತವರು ಹಾಗೂ ಕುಟುಂಬಸ್ಥರು ಈಗಲೂ ನ್ಯಾಯಕ್ಕಾಗಿ ಹಾತೊರೆಯುತ್ತಿದ್ದು, ಅವರ ಕೂಗು ಅರಣ್ಯ ರೋಧನವಾಗಿದೆ. ಈಮಧ್ಯೆ ಪೋಸ್ಟ್ ಮಾರ್ಟಂ ವರದಿಯಲ್ಲಿ ಆಕೆ ಕಟ್ಟಡದಿಂದ ಹಾರುವ ಮುನ್ನವೇ ಹೃದಯಾಘಾತದಿಂದ ಮತ್ತು ರಕ್ತ ಹೆಪ್ಪುಗಟ್ಟಿ ಮೃತರಾಗಿದ್ದಾರೆ ಎಂದು ಉಲ್ಲೇಖವಿದ್ದು ಇದು ಮನೆಯವರಿಗೆ ಇನ್ನಷ್ಟು ಸಂದೇಹಕ್ಕೆ ಕಾರಣವಾಗಿದೆ.

ಪ್ರೊಫೆಸರ್ ಬಂಧನ: ಆಕಾಂಕ್ಷ ಸಾವಿಗೆ ಕಾರಣವಾಗಿದ್ದ ಪ್ರೊಫೆಸರ್ ಬಿಲ್ಜಿ ಮ್ಯಾಥ್ಯೂ ನನ್ನು ಪ್ರಕರಣ ದಾಖಲಾದ ದಿನದಂದು ಪಂಜಾಬ್ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಬಂಧಿಸಿದ್ದರು ಬಳಿಕ ಕೆಲ ದಿನದಲ್ಲಿಯೇ ಜೈಲಿನಿಂದ ಬಿಡುಗಡೆಯಾಗಿದ್ದಾನೆ ಅಂತ ಮಾಹಿತಿ ಇದ್ದು, ಮಗಳನ್ನು ಈತನೇ ಯಾವುದೋ ಉದ್ದೇಶದಿಂದ ಕೊಲೆ ಮಾಡಿರುವ ಅನುಮಾನವಿದೆ ಅಂತ ಸಿಂಧೂದೇವಿ ನೇರ ಆರೋಪ ಮಾಡುತ್ತಿದ್ದಾರೆ. ಅದಲ್ಲದೆ LPU ಕಾಲೇಜಿನಲ್ಲಿ ಅನೇಕ ಯುವತಿಯರು ಸಾವನ್ನಪ್ಪಿರುವ ಘಟನೆಗಳು ದಾಖಲಾಗಿರುವುದು ಗೂಗಲ್ ಮೂಲಕ ನೋಡಿದ್ರೆ ಗೊತ್ತಾಗುತ್ತೆ ಎನ್ನುತ್ತಾರೆ.
ಮಾಹಿತಿ ಹಕ್ಕಿನಡಿ ಕೇಳಿದ ಮಾಹಿತಿಯೂ ಅಲಭ್ಯ: ಪಂಜಾಬ್ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ (ಎಲ್.ಪಿ.ಯು) ಇಲ್ಲಿ ಇಂಜಿನಿಯರಿಂಗ್ ನ ಪದವಿ ಓದಿದ್ದ ಆಕಾಂಕ್ಷ ಎಸ್ ನಾಯರ್ ದೆಹಲಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಹೆಚ್ಚಿನ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕಾಗಿ ಜರ್ಮನಿಗೆ ಹೋಗುವ ತಯಾರಿಯಲ್ಲಿ ಅಂತಿಮ ಸರ್ಟಿಫಿಕೆಟ್ ಪಡೆಯಲು ಮೇ.15 ರಂದು ದೆಹಲಿಯಿಂದ ಹೊರಟು ಮೇ.16 ರಂದು ಪಂಜಾಬ್ ಗೆ ತಲುಪಿದ್ದರು. ಮೇ.17 ಫಗ್ವಾರಾ ಪೊಲೀಸ್ ಠಾಣೆಯಿಂದ ಸಂಜೆ ತಾಯಿಗೆ ಕರೆ ಬಂದು, ನಿಮ್ಮ ಮಗಳು ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ನೀಡಿದ್ದರು.

ಆ ಬಳಿಕದ ವಿದ್ಯಮಾನಗಳಲ್ಲಿ ನಡೆದ ಘಟನೆ ಮತ್ತು ಪೊಲೀಸ್ ಕಾರ್ಯಾಚರಣೆ ಬಗ್ಗೆ ಮನೆಯವರಿಗೆ ಸಂದೇಹ ಬಂದುದರಿಂದ ಮುಖ್ಯ ಮಂತ್ರಿಗಳಿಗೆ, ರಾಜ್ಯದ ಪೊಲೀಸ್‌ಮಹಾ ನಿರ್ದೇಶಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ತಮ್ಮ ಮಗಳ ಅಸಹಜ ಸಾವು ಮತ್ತು ಅದಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಯ ಎಲ್ಲಾ ವಿದ್ಯಾಮಾನಗಳ ದಾಖಲೆಗಳನ್ನು ಬಯಸಿ ಮಾಹಿತಿ ಹಕ್ಕಿನಡಿ ಕೇಳಿದ ಮಾಹಿತಿಗೆ ಇದುವರೆಗೆ ಉತ್ತರ ಲಭಿಸಿಲ್ಲ. ಮರಣೋತ್ತರ ಪರೀಕ್ಷಾ ವರದಿ ಕೇಳಿದ್ದೇ 8 ತಿಂಗಳ ಬಳಿಕ ಕೈ ಸೇರಿದೆ. ಅದರಲ್ಲಿ ಮತ್ತಷ್ಟು ಸಂದೇಹ ಹೆಚ್ಚಾಗಿದೇ ವಿನಹ ಪರಿಹಾರದ ಭರವಸೆ ಇಲ್ಲ.ಇದೀಗ ಎಫ್.ಎಸ್.ಎಲ್ ರಿಪೋರ್ಟ್, ಆಕೆಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್, ಘಟನೆ ನಡೆದ ಕಾಲೇಜಿನ ಸಿಸಿ ಟಿ.ವಿ ಪುಟೇಜ್ ಗಳು, ಎ.ಸಿ ಯವರು ನಡೆಸಿದ ತನಿಖೆಯ ಅಂಶಗಳು, ಸ್ಥಳ ಮಹಜರು ವಿವರ ಮತ್ತು ಫೋಟೋಗಳು, ಐದು ಜನರ ತನಿಖಾ ತಂಡ ನಡೆಸಿದ ತನಿಖಾ ವಿವರ ಇದೆಲ್ಲವನ್ನೂ ಮಾಹಿತಿ ಹಕ್ಕಿನಡಿ ಬಯಸಿ ಮೃತಳ ತಂದೆ ಪಂಜಾಬ್ ಎಎಸ್‌ಪಿ ಅವರಿಗೆ ಪತ್ರ ಕಳಿಸಿದ್ದಾರೆ. ಮಾಹಿತಿ ಮರು ರವಾನಿಸಲು ಪೆನ್ ಡ್ರೈವ್, ಇವರ ವಿಳಾಸ ಬರೆದ ಕವರ್ ಸಹಿತ ಕಳಿಸಿಕೊಟ್ಟರೂ ಇನ್ನೂ ಪ್ರತಿಕ್ರಿಯೆ ಶೂನ್ಯ. ವಿಚಾರಣೆ ಮಾಡಿದರೆ, ಸೀನಿಯರ್ ಆಥಾರಿಟಿ ಅನುಮತಿ ಬಂದ ಬಳಿಕ ಕಳಿಸಿಕೊಡುತ್ತೇವೆ ಎಂದಷ್ಟೇ ಉತ್ತರ ಬಂದಿದೆ ಎನ್ನುತ್ತಾರೆ ಮನೆಯವರು.
ಅನ್ಯ ರಾಜ್ಯವಾದುದರಿಂದ ಏನೂ ಮಾಡಲಾಗದು ಎಂದ ಮಹಿಳಾ ಆಯೋಗ: ಈ ಮಧ್ಯೆ ಮಗಳ ನ್ಯಾಯಕ್ಕಾಗಿ ಕಛೇರಿ ಕಛೇರಿ ಅಲೆಯತ್ತಿರುವ ಮೃತಳ ಹೆತ್ತವರು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಅವರನ್ನೂ ಭೇಟಿ ಮಾಡಿದ್ದಾರೆ. ಇದು ಅನ್ಯ ರಾಜ್ಯದ ವಿಚಾರವಾಗಿರುವುದರಿಂದ ನೀವು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರನ್ನು ಭೇಟಿ ಮಾಡಿದರೆ ನಿಮಗೆ ಮಾಹಿತಿ ದೊರೆಯುತ್ತದೆ ಎಂದಷ್ಟೇ ತಿಳಿಸಿದ್ದಾರೆಂದು ಹೇಳುತ್ತಾರೆ.
ಹೆತ್ತವರ ನಿತ್ಯ ಕಣ್ಣೀರು: ಒಟ್ಟಾರೆಯಾಗಿ ಹೆತ್ತವರು ತಮ್ಮ ಅತ್ಯಂತ ಪ್ರೀತಿಯ ಮಗಳನ್ನು ಕಳೆದುಕೊಂಡ ದುಃಖದಿಂದ ಇನ್ನೂ ಹೊರಬಂದಿಲ್ಲ. ಏಕೈಕ ಪುತ್ರಿಯನ್ನು ಅತ್ಯಂತ ಮುದ್ದಿನಿಂದ ಸಾಕಿದ್ದ ದಂಪತಿ ಆಕೆಯ ವಿದ್ಯಾಭ್ಯಾಸಕ್ಕಾಗಿ ಮನೆಯನ್ನೂ ಕಳೆದುಕೊಳ್ಳುವಷ್ಟು ಸಾಲ ಮಾಡಿದ್ದರು. ಮಗಳು ಬಯಸಿದ ಕ್ಷೇತ್ರದಲ್ಲೇ ಆಕೆಯನ್ನು ಬೆಳೆಸಿ ಉನ್ನತ ಮಟ್ಟಕ್ಕೆ ಏರಿಸುವ ಕನಸು ಕಂಡಿದ್ದರು. ಆದರೆ ವಿಧಿಯ ಬರಹವೇ ಬೇರೆಯಾಗಿತ್ತು.

ಕೇಂದ್ರ ಸಚಿವರ ಭೇಟಿ ಮಾಡಿ ಸಿಬಿಐ &ಎನ್.ಐ.ಎ ಗೆ ನೀಡಲು ಮನವಿ; ಕರ್ನಾಟಕದ ಯಾವ ಸಚಿವರು ಮಂತ್ರಿಗಳಿಂದ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಂದ ಮಗಳ ಸಾವಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಹಾಗಿರುವಾಗ ಮುಂದಿನ ತಿಂಗಳ ಅಧಿವೇಶನ ನಡೆಯುವ ವೇಳೆ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅವರಲ್ಲಿ ಸಿಬಿಐ ಅಥವಾ ಎನ್.ಐ.ಎ ತನಿಖೆ ನಡೆಸಿದರೆ ಸಾವಿಗೆ ನಿಖರ ಕಾರಣ ಹೊರಬೇಕೆಂದು ಮನವಿ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಾಯಿ ಸಿಂಧೂದೇವಿ ಮತ್ತು ತಂದೆ ಸುರೇಂದ್ರ ನಾಯರ್ ಮಹಾಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.


