ಉಡುಪಿ: ಮಧ್ಯರಾತ್ರಿ 12.30 ಗಂಟೆಯವರೆಗೆ ಮಾತ್ರ ಉಡುಪಿ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಹೇಳಿದ್ದಾರೆ.
ಹೊಸ ವರ್ಷ ಆಚರಣೆಯ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಇಂದು ಮಾಹಿತಿ ನೀಡಿರುವ ಎಸ್ಪಿ ಡಾ. ಅರುಣ್, ರಾತ್ರಿ ಹತ್ತು ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಭ್ರಮಾಚರಣೆಯ ಬಳಿಕ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಮತ್ತು ಕಾರು ಸವಾರರು ಸೀಟ್ ಬೆಲ್ಟ್ ಧರಿಸಬೇಕು ಎಂದು ಎಸ್ಪಿ ಸೂಚನೆ ನೀಡಿದ್ದಾರೆ.
ಸಂಭ್ರಮಾಚರಣೆಯ ಕಾರಣಕ್ಕೆ ಜನಸಂದಣಿ ಸೇರುವ ಬೀಚ್ ಗಳಲ್ಲಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗುತ್ತಿದ್ದು, ಅಪಾರ್ಟ್ ಮೆಂಟ್ ಮತ್ತು ಹೋಂ ಸ್ಟೇ ಗಳಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು, ರೇವ್ ಪಾರ್ಟಿಗಳು ನಡೆಯದಂತೆ ಪೊಲೀಸ್ ಇಲಾಖೆ ಗಮನ ಹರಿಸಲಿದೆ.
ಇದೇ ವೇಳೆ ಉಡುಪಿ ಜಿಲ್ಲೆಯ ಯಾವುದೇ ಭಾಗದಲ್ಲಿ ನೈತಿಕ ಪೊಲೀಸ್ ಗಿರಿ ನಡೆಯುವುದು ಕಂಡು ಬಂದರೆ ಕೂಡಲೇ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆಯೂ ಎಸ್ಪಿ ಡಾ. ಅರುಣ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


