
ಆಗಸ್ಟ್ 13 ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಆ.14 ರಂದು ನೂತನ ಉಪಸಭಾಪತಿಗಳ ಆಯ್ಕೆ ನಡೆಯಲಿದೆಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೊರಟ್ಟಿ ಈ ನಿರ್ಧಾರ ತಳೆದಿದ್ದು, ದೇಶದ ವಿಧಾನ ಪರಿಷತ್ ಇತಿಹಾಸದಲ್ಲೇ ಅತ್ಯಂತ ಹಿರಿಯ ನಾಯಕರಾದ ಅವರ ಹೃದಯ ವೈಶಾಲ್ಯತೆಯನ್ನು ಸಿಎಂ ಶ್ಲಾಘಿಸಿದ್ದಾರೆ. ಹೊಸ ಸಭಾಪತಿಗಳ ನೇಮಕವಾಗುವವರೆಗೆ ಬಸವರಾಜ ಹೊರಟ್ಟಿಯವರನ್ನೇ ಈ ಸ್ಥಾನದಲ್ಲಿ ಹಂಗಾಮಿಯಾಗಿ ಮುಂದುವರಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 13 ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಆ.14 ರಂದು ನೂತನ ಉಪಸಭಾಪತಿಗಳ ಆಯ್ಕೆ ನಡೆಯಲಿದೆ. ತದನಂತರ ನೂತನ ಉಪಸಭಾಪತಿಗಳ ಮೂಲಕವೇ ಸಭಾಪತಿಗಳ ಚುನಾವಣೆ ಪ್ರಕ್ರಿಯೆ ನೆರವೇರಲಿದೆ. ಹೊರಟ್ಟಿಯವರ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಮಾತನಾಡಿದ ಶಿವಕುಮಾರ್, ಪರಸ್ಪರ ಒಪ್ಪಂದಕ್ಕೆ ಬಂದ ಮೇಲೆ ಅವಿಶ್ವಾಸ ನಿರ್ಣಯ ಮಂಡನೆಯು ಅಪ್ರಸ್ತುತವಾಗುತ್ತದೆ ಎಂದಿದ್ದಾರೆ. ಅಲ್ಲದೆ, ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯ ನಂತರ ಪರಿಷತ್ತಿನ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವ ಹೊರಟ್ಟಿಯವರ ಇಚ್ಛೆಯನ್ನು ಗೌರವಿಸುವುದಾಗಿಯೂ ಮುಖ್ಯಮಂತ್ರಿ ತಿಳಿಸಿದ್ದಾರೆ.


