
ಮಂಗಳೂರು; ನ್ಯೂ ಮಂಗಳೂರು ಪೋರ್ಟ್ ಯೂಸರ್ಸ್ ವೆಲ್ಫೇರ್ ಅಸೋಸಿಯೇಷನ್ನ (ನವ ಮಂಗಳೂರು ಬಂದರು ಬಳಕೆದಾರರ ಕಲ್ಯಾಣ ಸಂಘದ) ನೂತನ ಪದಾಧಿಕಾರಿಗಳನ್ನು ಗುರುವಾರ, ಜುಲೈ 30, 2026ರಂದು ನಗರದ ಹೋಟೆಲ್ ದೀಪಾ ಕಂಫರ್ಟ್ಸ್ನ ಸೆನೆಟ್ ಹಾಲ್ನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳಾಗಿ ಡೆಲ್ಟಾ ಮೆರೈನ್ ಸರ್ವಿಸಸ್ನ ಪಿ. ಕೆ. ಎಸ್. ಪಿಳ್ಳೈ (ಅಧ್ಯಕ್ಷರು), ಯೋಜಕ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ನ ವಿನಯ ಕುಮಾರ್ (ಉಪಾಧ್ಯಕ್ಷರು), ಓಷನ್ ಮೆರೈನ್ ಸಪ್ಲೈಸ್ನ ಕೆ. ಎ. ರವಿ ಕುಮಾರ್ (ಕಾರ್ಯದರ್ಶಿ), ಮಹೇಶ್ ಕೆ. ಎಸ್. (ಜಂಟಿ ಕಾರ್ಯದರ್ಶಿ) ಹಾಗೂ ಶ್ರೀನಿವಾಸ ಕುಲಾಲ್ (ಖಜಾಂಚಿ) ಅವಿರೋಧವಾಗಿ ಆಯ್ಕೆಯಾದರು. ಅಲ್ಲದೆ, 16 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಸಂಘದ ಸಂಸ್ಥಾಪಕ ಸದಸ್ಯರಾಗಿರುವ ಪಿ. ಕೆ. ಎಸ್. ಪಿಳ್ಳೈ ಅವರು ಈ ಹಿಂದೆ ಹಲವು ವರ್ಷಗಳ ಕಾಲ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಸ್ವೀಕಾರ ಭಾಷಣದಲ್ಲಿ ಅವರು ತಮ್ಮ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ಬೆಳವಣಿಗೆಗಾಗಿ ಶ್ರಮಿಸುವುದರ ಜೊತೆಗೆ ಬಂದರು ಬಳಕೆದಾರರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಆರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ ಅವರು ಸದಸ್ಯರನ್ನು ಸ್ವಾಗತಿಸಿದರು. ಸಂಘದ ಅಧ್ಯಕ್ಷರಾಗಿ ಹತ್ತು ವರ್ಷಗಳ ಸೇವೆಯನ್ನು ಸ್ಮರಿಸಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ ಸಂಘದ ನಿರಂತರ ಬೆಳವಣಿಗೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ನಿತ್ಯಾನಂದ ಪೈ ವಾರ್ಷಿಕ ವರದಿಯನ್ನು ಮಂಡಿಸಿದರು, ಖಜಾಂಚಿ ಅಶ್ವಿತ್ ಲೆಕ್ಕಪರಿಶೋಧಿತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು.
ಅಸೋಸಿಯೇಷನ್ ಆಫ್ ನ್ಯೂ ಮಂಗಳೂರು ಪೋರ್ಟ್ ಸ್ಟೀವ್‌ಡೋರ್ಸ್ನ ಅಧ್ಯಕ್ಷ ಎಸ್. ಶೇಖರ್ ಪೂಜಾರಿ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ನಿರ್ಗಮಿತ ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ ವಂದಿಸಿದರು.


