ಮಂಗಳೂರು; ಮೊನ್ನೆ. 189 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ನಿನ್ನೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ನೀಡಿರುವುದನ್ನು ಉಲ್ಲೇಖಿಸಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು
ಆ ಪೋಸ್ಟ್ ನಲ್ಲಿ ದಲಿತೋದ್ಧಾರ ಎಂಬುದು ಬಿಜೆಪಿಗೆ ಭಾಷಣದ ಸರಕಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ, ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಆದಿದ್ರಾವಿಡ ಸಮುದಾಯದ ಓರ್ವ ಮಹಿಳೆ, ಮಹಿಳಾ ಮೋರ್ಚಾದ ಸಾಮಾನ್ಯ ಕಾರ್ಯಕರ್ತೆ ‘ಭಾಗೀರಥಿ ಮುರುಳ್ಳ’ರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಈ ಎಲ್ಲವೂ ಬಿಜೆಪಿಯಲ್ಲಿ ಮಾತ್ರ ಸಾಧ್ಯ!’ ಎಂದು ಬರೆಯಲಾಗಿತ್ತು. ಇದೀಗ ಈ ಪೋಸ್ಟ್ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ,
ಮೀಸಲು ಕ್ಷೇತ್ರದಲ್ಲಿ ದಲಿತರಿಗಲ್ಲದೆ ಸಾಮಾನ್ಯರಿಗೆ ಟಿಕೆಟ್ ನೀಡಲು ಆಗುತ್ತದೆಯೇ? ಮೀಸಲು ಕ್ಷೇತ್ರದಲ್ಲಿ ಪಕ್ಷೇತರ ನಿಂತರೂ ದಲಿತರೇ ನಿಲ್ಲಬೇಕು, ಅದನ್ನು ದಲಿತೋದ್ಧಾರ ಎಂದು ಬಿಂಬಿಸುವುದು ಎಷ್ಟು ಸರಿ ಎಂದು ನೆಟ್ಟಿಗರು ಕಟೀಲ್‌ರನ್ನು ತರಾಟೆಗೆ ತೆಗೆದಿದ್ದಾರೆ. ಅಲ್ಲದೇ ಅದರಲ್ಲಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ಇದಕ್ಕೆ ನೆಟ್ಟಿಗರು ಸಿಕ್ಕಾಪಟ್ಟೆ ಕಮೆಂಟ್ ಗಳ ಸುರಿಮಳೆ ಸುರಿಸಿ ಕಟೀಲ್ ರ ಕಾಲೆಳೆಯುತ್ತಿದ್ದಾರೆ. ಹಾಗಾಗಿ ಸೆಲ್ಪ್ ಪ್ರಮೋಷನ್ ಗೆ ಹೋಗಿ ಬಿಜೆಪಿ ರಾಜ್ಯಾಧ್ಯಕ್ಷರು ಸದ್ಯ ತಾವೇ ಟ್ರೋಲ್ ಗೆ ಒಳಗಾಗಿದ್ದಾರೆ.