ನವದೆಹಲಿ(ಮೇ 10): ಸಿಕ್ಕಿಂ ನ ಚೀನಾ ಗಡಿಭಾಗದಲ್ಲಿ ಪಹರೆ ನಡೆಸುವ ವೇಳೆ ಭಾರತ ಮತ್ತು ಚೀನಾದ 150 ಸೈನಿಕರು ಪರಸ್ಪರ ಮುಖಾಮುಖಿಯಾಗಿ ಗುಂಡಿನ ಚಕಮಕಿ ನಡೆಸಿದ ಘಟನೆ ನಾಕು ಲಾ ಪಾಸ್ ಬಳಿ ಸಂಭವಿಸಿದೆ. ಈ ಗುಂಡಿನ ಕಾಳಗದಲ್ಲಿ ನಾಲ್ವರು ಭಾರತೀಯ ಸೈನಿಕರು ಮತ್ತು ಏಳು ಚೀನೀ ಸೈನಿಕರಿಗೆ ಗಾಯಗಳಾಗಿವೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
‘ಎರಡೂ ಕಡೆಯ ಸೈನಿಕರಿಂದ ಆಕ್ರಮಣಕಾರಿಯಾಗಿ ವರ್ತಿಸಿದ್ದಾರೆ. ಎರಡೂ ಕಡೆಯವರೆರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಮಟ್ಟದಲ್ಲಿ ಕೂಡಲೇ ಮಾತುಕತೆಯಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವುದು ತಪ್ಪಿತು’ ಎಂದು ಸೇನೆ ಹೇಳಿಕೆ ನೀಡಿದೆ.
ಸಮುದ್ರಮಟ್ಟದಿಂದ 5,000 ಮೀಟರ್ ಎತ್ತರದಲ್ಲಿರುವ ನಾಕು ಲಾ ಹಾದಿಯು ಉತ್ತರ ಸಿಕ್ಕಿಂ ಮತ್ತು ಚೀನಾದ ಗಡಿಯಲ್ಲಿದೆ. ಇಲ್ಲಿ ಸಾಮಾನ್ಯವಾಗಿ ಎರಡೂ ದೇಶಗಳ ಸೈನಿಕರು ಮುಖಾಮುಖಿಯಾಗಿ ಜಗಳ ಆಡುವುದು ಕಡಿಮೆಯೇ. ಎಲ್ಎಸಿ ಅಥವಾ ವಾಸ್ತವ ಗಡಿ ರೇಖೆಯಲ್ಲಿ ಸೈನಿಕರ ಕಾಳಗ ಸಾಮಾನ್ಯವಾಗಿರುತ್ತದೆ. ಗಡಿ ವಿವಾದ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಇಂಥ ಕಾಳಗಗಳು ಸ್ಥಳೀಯ ಮಟ್ಟದಲ್ಲಿ ನಡೆಯುತ್ತಲೇ ಇರುತ್ತವೆ.


