ಬೆಳ್ತಂಗಡಿ: ಒಟ್ಟಿಗೆ ಸೇರಿ ಮದ್ಯ ಸೇವಿಸಿ ನಂತರ ನಡೆದ ಕ್ಷುಲ್ಲಕ ಕಾರಣಕ್ಕೆ 60 ವರ್ಷದ ವ್ಯಕ್ತಿಯನ್ನು ಅವರ ಮಾವನ ಮಗನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವೇಣೂರಿನಲ್ಲಿ ನಡೆದಿದೆ.

ಕರಿಮಣೇಲು ಗ್ರಾಮದ ಗಾಂಧಿನಗರದ ನಿವಾಸಿ ಸಂಜೀವ ಶೆಟ್ಟಿ(60) ಮೃತ ವ್ಯಕ್ತಿ. ಕುಡಿದು ಗಲಾಟೆಯಾಗಿ ನಂತರ ಸಂಜೀವ ಶೆಟ್ಟಿಯ ಮಾವನ ಮಗ ಶ್ರೀಶ ಶೆಟ್ಟಿಯೇ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಸಂಜೀವ ಶೆಟ್ಟಿಯವರು ಬೇರೆಯವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಇವರ ಜೊತೆ ಕೆಲಸಕ್ಕೆ ಹೋಗುತ್ತಿದ್ದ ಇನ್ನೋರ್ವ ವ್ಯಕ್ತಿ ಇಂದು ಬೆಳಗ್ಗೆ ತಡವಾದರೂ ಕೆಲಸಕ್ಕೆ ಯಾಕೆ ಬಂದಿಲ್ಲ ಎಂದು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಕೊಲೆ ನಡೆಸಿ ಪರಾರಿಯಾಗಿದ್ದ ಆರೋಪಿಯ ಜಾಡು ಹಿಡಿದ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ಪೋಲೀಸರ ತಂಡ, ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಉಜಿರೆ ಸಮೀಪದ ಸೊಮಂದಡ್ಕ ಅಂಗಡಿಯ ಬಳಿ ವಶಕ್ಕೆ ಪಡೆದಿದ್ದಾರೆ.

ಹತ್ಯೆ ನಡೆದ ಘಟನಾ ಸ್ಥಳಕ್ಕೆ ಬಂಟ್ವಾಳ ಡಿವೈಎಸ್ಪಿ , ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ವೇಣೂರು ಪೊಲೀಸರು ಹಾಗು ಬೆರಳಚ್ಚು ತಜ್ಙರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


