2014ರಲ್ಲಿ ವೇಶ್ಯಾವಾಟಿಕೆಗೆ ಬಲವಂತಪಡಿಸಿದ ಆರೋಪದಡಿ ಮಹಿಳೆ ಸೇರಿ ಇಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮುಂಬೈ ಸೆಷನ್ ನ್ಯಾಯಾಲಯ ಖುಲಾಸೆಗೊಳಿಸಿದೆ.
ಮುಂಬೈನ ಗ್ರಾಂಟ್ ರಸ್ತೆಯಲ್ಲಿರುವ ವೇಶ್ಯಾವಾಟಿಕೆ ಅಡ್ಡೆಯ ಮೇಲೆ 2014ರಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರ ತಂಡದಲ್ಲಿ ಮಹಿಳಾ ಪೊಲೀಸರು ಇರಲಿಲ್ಲ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಅನೈತಿಕ ಚಟುವಟಿಕೆ ತಡೆ ಕಾಯ್ದೆಯ ಪ್ರಕಾರ, ಪೊಲೀಸರು ವೇಶ್ಯಾಗೃಹಗಳ ಮೇಲೆ ದಾಳಿ ನಡೆಸುವಾಗ ಕಡ್ಡಾಯವಾಗಿ ಮಹಿಳಾ ಸಿಬ್ಬಂದಿ ಇರಬೇಕು ಎಂದು ಅಭಿಪ್ರಾಯಪಟ್ಟಿದೆ. ಹಾಗೂ “ಪೊಲೀಸರು ಸೆಕ್ಷನ್ 15(6ಎ) ನಿಯಮ ಉಲ್ಲಂಘಿಸಿದ್ದಾರೆ” ಎಂದು ಆರೋಪಿ ಪರ ವಕೀಲರು ನ್ಯಾಯಾಲಯದ ಗಮನ ಸೆಳೆದರು.
ಇನ್ನು ಪೋಲಿಸರು “ವೇಶ್ಯಾಗೃಹ, ಮಾನವ ಕಳ್ಳಸಾಗಣೆಯಂಥ ಸಂದರ್ಭಗಳಲ್ಲಿ ದಾಳಿ ನಡೆಸುವಾಗ ಪೊಲೀಸರ ತಂಡದಲ್ಲಿ ಕಡ್ಡಾಯವಾಗಿ ಕನಿಷ್ಠ ಇಬ್ಬರು ಮಹಿಳಾ ಸಿಬ್ಬಂದಿ ಇರಬೇಕು. ಹಾಗೂ ಮಹಿಳಾ ಆರೋಪಿಗಳನ್ನು ಮಹಿಳಾ ಪೊಲೀಸ್ ಸಿಬ್ಬಂದಿ ಮಾತ್ರ ವಿಚಾರಣೆಗೆ ಒಳಪಡಿಸಬೇಕು ಎಂದು ತಿಳಿಸಿದೆ.
ಒಂದು ವೇಳೆ ಮಹಿಳಾ ಪೊಲೀಸ್ ಅಧಿಕಾರಿ ಲಭ್ಯವಿಲ್ಲದಿದ್ದರೆ, ಮಾನ್ಯತೆ ಪಡೆದ ಕಲ್ಯಾಣ ಸಂಸ್ಥೆಯ ಮಹಿಳಾ ಅಧಿಕಾರಿ, ಮಹಿಳಾ ಆರೋಪಿಗಳನ್ನು ವಶಕ್ಕೆ ಪಡೆಯಬೇಕು. ಪ್ರಸ್ತುತ ಪ್ರಕರಣದ ದಾಳಿಯ ವೇಳೆ ಮಹಿಳಾ ಪೊಲೀಸ್ ಅಧಿಕಾರಿ ಉಪಸ್ಥಿತರಿರಲಿಲ್ಲ ಎಂಬುದು ಸಾಬೀತಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಆ ಲೋಪದ ಹಿನ್ನೆಲೆಯಲ್ಲೇ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಕೋರ್ಟ್ ತಿಳಿಸಿದೆ.


