ಬೆಂಗಳೂರು: ಮುಡಾ ಹಗರಣದಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಲೋಕಾಯುಕ್ತ ವಿಚಾರಣೆ ಎದುರಿಸಿದ್ದು, ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಶೀಘ್ರದಲ್ಲೇ ಇಬ್ಬರಿಗೂ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ.
ಮುಡಾ ಅಕ್ರಮದ ವಿವರಗಳನ್ನು ಗೌಪ್ಯವಾಗಿ ಕೆದಕುತ್ತಿರುವ ಇ.ಡಿ. ಈಗಾಗಲೇ ಮುಡಾದ ಮಾಜಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.
ಇನ್ನು ಇ.ಡಿ ಮುಡಾ ಮಾಜಿ ಆಯುಕ್ತ ದಿನೇಶ್ ಹಾಗೂ ಮುಡಾದಲ್ಲಿ ಹಗರಣ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ಉನ್ನತ ಹುದ್ದೆಯಲ್ಲಿರುವ ಕೆಲವು ಅಧಿಕಾರಿಗಳಿಗೆ ಸಮನ್ಸ್ ತಲುಪಿಸಿದ್ದು, ಇವರ ವಿಚಾರಣೆ ನಡೆಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಕ್ಷ್ಯ ಕಲೆ ಹಾಕಿದ ಬಳಿಕ ಸಿಎಂ ಹಾಗೂ ಅವರ ಪತ್ನಿಗೆ ಸಮನ್ಸ್ ನೀಡುವ ಸಾಧ್ಯತೆಗಳಿವೆ. ಸಿಎಂ ಅಕ್ರಮ ಎಸಗಿರುವುದಕ್ಕೆ ಸಣ್ಣ ಸಾಕ್ಷ್ಯ ಸಿಕ್ಕಿದರೂ ಅವರ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಸಂಗ್ರಹಿಸಿ ಅಲ್ಲೇ ಪ್ರಾಥಮಿಕ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಿಎಂ ಸಿದ್ಧರಾಮಯ್ಯ ಅವರು, ಮುಡಾ ಪ್ರಕರಣದ ಕುರಿತು ಬುಧವಾರ ಲೋಕಾಯುಕ್ತ ತನಿಖೆಗೆ ಹಾಜರಾಗಿ ಬಂದಿದ್ದೇನೆ. ಆದರೆ ಈಗ ಇದುವರೆಗೂ ನನಗೆ ಇ.ಡಿ.ಯಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದಿದ್ದಾರೆ.