ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟ ಪ್ರಕರಣವನ್ನು ಕೇವಲ ಪರಿಹಾರ ಮತ್ತು ಉದ್ಯೋಗದ ವಿಚಾರಕ್ಕೆ ಸೀಮಿತಗೊಳಿಸದೆ, ಸುರಕ್ಷತಾ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಎಂಆರ್‌ಪಿಎಲ್ ಮಜ್ದೂರ್ ಸಂಘದ ಗೌರವಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಆರ್‌ಪಿಎಲ್‌ನಂತಹ ಬೃಹತ್ ಕೈಗಾರಿಕಾ ಘಟಕಗಳಲ್ಲಿ ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಂಸ್ಥೆಯಲ್ಲಿ ಈ ಹಿಂದೆ ನಡೆದಿರುವ ಅವಘಡಗಳನ್ನೂ ಸಮಗ್ರವಾಗಿ ತನಿಖೆ ನಡೆಸಿ, ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸ್ಫೋಟದಲ್ಲಿ ಮೃತಪಟ್ಟ ಮನೀಶ್ ಕರ್ಕೇರ ಅವರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ನೀಡಿರುವುದನ್ನು ಸ್ವಾಗತಿಸಿದ ಅವರು, ಕುಟುಂಬಕ್ಕೆ ಅಗತ್ಯ ನೆರವು ಹಾಗೂ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಎಂಆರ್‌ಪಿಎಲ್‌ನ ಗುತ್ತಿಗೆ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಕನಿಷ್ಠ ₹10 ಲಕ್ಷ ಆರೋಗ್ಯ ವಿಮೆ ಮತ್ತು ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ₹25 ಲಕ್ಷ ವಿಮಾ ಸೌಲಭ್ಯ ಕಲ್ಪಿಸಬೇಕು. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಕಾರ್ಮಿಕರನ್ನು ಉದ್ಯೋಗದಿಂದ ವಜಾಗೊಳಿಸಲಾಗುತ್ತಿದೆ ಎಂಬ ಆರೋಪಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಅನಿಲ ಸೋರಿಕೆ ಸೇರಿದಂತೆ ಅಪಾಯಕಾರಿ ಪರಿಸ್ಥಿತಿಗಳನ್ನು ತಕ್ಷಣ ಪತ್ತೆಹಚ್ಚಲು ಡಿಟೆಕ್ಷನ್ ವ್ಯವಸ್ಥೆ, ಎಚ್ಚರಿಕೆ ಸೈರನ್ ಹಾಗೂ ತುರ್ತು ಸ್ಥಳಾಂತರ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕಾರ್ಮಿಕರ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.


