ಮಂಗಳೂರು: ಲೋಕಸಭೆಯ ಅಧಿವೇಶನದ ಸಂದರ್ಭದಲ್ಲಿ ನಿಯಮ 377ರ ಪ್ರಕಾರ ಸಂಸದರಿಗೆ ತಮ್ಮ ವಿಷಯಗಳನ್ನು ಸದನದ ಮುಂದಿಡುವ ಅವಕಾಶವಿರುತ್ತದೆ. ಇದರಂತೆಯೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ‘ದ.ಕ ಜಿಲ್ಲೆಯಲ್ಲಿ ದಿನಗಳೆದಂತೆ ಹೆಚ್ಚುತ್ತಿರುವ ಮಾದಕದ್ರವ್ಯ ವ್ಯಸನ ಮತ್ತು ಮಾರಾಟದ ಚಟುವಟಿಗೆಗಳ’ ಕುರಿತು ಸದನದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅವರು ಸಲ್ಲಿಸಿರುವ ನೋಟೀಸ್‌ನಲ್ಲಿರುವ ವಿಚಾರಗಳು ಈ ಕೆಳಗಿನಂತಿವೆ; “ನಗರದಲ್ಲಿ ಡ್ರಗ್ಸ್ ಚುಟುವಟಿಕೆಗಳು ಜಾಸ್ತಿಯಾಗಿದ್ದು, ಈ ಕುರಿತಂತೆ ಪ್ರತಿ ತಿಂಗಳ ಮಾಧ್ಯಮಗಳ ಹೆಡ್‌ಲೈನ್‌ಗಳನ್ನು ಗಮನಿಸಿದರೆ ವಿಚಾರವನ್ನು ಸ್ಪಷ್ಟವಾಗಿ ಗಮನಿಸಬಹುದು. ಮಂಗಳೂರು ನಗರವು ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ದೇಶದಾದ್ಯಂತದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಮಾದಕದ್ರವ್ಯಗಳ ವ್ಯಾಪಾರಕ್ಕೆ ಹೆಚ್ಚಿನ ಅವಕಾಶಗಳು ಇದೆ ಎಂಬುವುದು ಅಲ್ಲಗಳೆಯಲಾಗದ ವಿಷಯ.ಕಳೆದ ವರ್ಷ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಕೂಡ ಸಾಬೀತಾಗಿತ್ತು. ಪೊಲೀಸರಿಂದ ನಿರಂತರ ಕಾರ್ಯಾಚರಣೆ ನಡೆದರೂ ಮಾದಕದ್ರವ್ಯ ಮಾರಟ ಮತ್ತು ವ್ಯಸನೆಯಲ್ಲಿ ಇಳಿಕೆ ಕಂಡಿಲ್ಲ ಹೊರತು ಇದರ ಮುಂದುವರಿದ ಭಾಗವಾಗಿ ಶಾಲಾ ಮಕ್ಕಳು ಕೂಡ ಇದರ ವ್ಯಸನಕ್ಕೆ ಒಳಗಾಗುತ್ತಿರುವುದು ಭಯಾನಕ,” ಎಂದು ಉಲ್ಲೇಖಿಸಿದ್ದಾರೆ.
ಇನ್ನು ಇಂತಹ ಚಟುವಟಿಕೆಗಳಿಗೆ ಬಲಿಯಾಗುತ್ತಿರುವವರು ಉತ್ತಮ ಆದಾಯವನ್ನು ಹೊಂದಿರುವ ಮನೆತನದಿಂದ ಬಂದಂತಹ ಯುವಕರು. ಇವರೇ ಡ್ರಗ್ ಪೆಡ್ಲರ್‌ಗಳ ಮುಖ್ಯ ಟಾರ್ಗೆಟ್ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡದಲ್ಲಿ ವಿದ್ಯಾರ್ಥಿನಿಯರನ್ನು ಕೂಡ ಪೆಡ್ಲರ್‌ಗಳಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ವರದಿಗಳಿದೆ. ಮಂಗಳೂರು ನಗರದಲ್ಲಿರುವ ಮಾದಕ ವ್ಯಸನ ನಿರ್ಮೂಲನಾ ಕೇಂದ್ರಗಳಿಗೆ ತಿಂಗಳಿಗೆ ಸರಾಸರಿ 60 ಮಂದಿ ಭೇಟಿ ನೀಡುತ್ತಿರುವುದು ಭಯಾನಕ ವಿಷಯ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮಾದಕದ್ರವ್ಯ ಚಟುವಟಿಗಳನ್ನು ಮಟ್ಟ ಹಾಕಬೇಕಾಗಿದೆ ಯಾಕೆಂದರೆ ಇದರಿಂದ ಬರುವಂತಹ ಆದಾಯವು ನೇರವಾಗಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ” ಆದ್ದರಿಂದ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮಾದಕದ್ರವ್ಯದ ಜಾಲವನ್ನು ಬುಡ ಸಮೇತ ಕಿತ್ತುಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದರು ಸಲ್ಲಿಸಿದ ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.