ಕುಂದಾಪುರ: ಅಂಗವಿಕಲತೆಯಿಂದ ಬಳಲುತ್ತಿದ್ದ ಹೆತ್ತ ಮಗಳನ್ನು ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು, ಬಳಿಕ ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾನಾಡಿ ಕೊರಗ ಕಾಲನಿಯಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ. ಶಾನಾಡಿ ಕೊರಗ ಕಾಲನಿ ನಿವಾಸಿ ಸುಧಾಕರ್ ಅವರ ಪತ್ನಿ ನೇತ್ರಾವತಿ (40) ಹಾಗೂ ಪುತ್ರಿ ಸುಪ್ರತಿ (14) ಮೃತಪಟ್ಟ ದುರ್ದೈವಿಗಳು.
ಘಟನೆಯ ವಿವರ: ಮೃತ ಬಾಲಕಿ ಸುಪ್ರತಿ ಬಾಲ್ಯದಿಂದಲೂ ತೀವ್ರ ಅಂಗವಿಕಲತೆಯಿಂದ ಬಳಲುತ್ತಿದ್ದು, ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಳು. ಆಕೆಯ ಚಿಕಿತ್ಸೆಗೆ ಕುಟುಂಬಸ್ಥರು ಎಷ್ಟೇ ಪ್ರಯತ್ನಿಸಿದರೂ ಯಾವುದೇ ಚೇತರಿಕೆ ಕಂಡುಬಂದಿರಲಿಲ್ಲ. ಮಗಳ ಸಂಪೂರ್ಣ ಆರೈಕೆಯನ್ನು ತಾಯಿ ನೇತ್ರಾವತಿಯೇ ಮಾಡುತ್ತಿದ್ದರು. ಆದರೆ, ಮಗಳ ದಿನನಿತ್ಯದ ನರಕಯಾತನೆ ಹಾಗೂ ಸ್ಥಿತಿಯನ್ನು ಕಂಡು ಆಕೆ ತೀವ್ರ ಮನನೊಂದಿದ್ದರು ಎಂದು ಪತಿ ಸುಧಾಕರ್ ತಿಳಿಸಿದ್ದಾರೆ. ರವಿವಾರ ಬೆಳಿಗ್ಗೆ ಸುಮಾರು 8:30ರ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇತ್ರಾವತಿ ಅವರು ಮಗಳು ಸುಪ್ರತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ. ಬಳಿಕ ತಾವೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅನಾಥವಾಯಿತು ಎರಡು ವರ್ಷದ ಮಗು: ದಂಪತಿಗೆ ಎರಡು ವರ್ಷದ ಗಂಡು ಮಗುವಿದ್ದು, ಒಂದೇ ಕ್ಷಣದಲ್ಲಿ ತಾಯಿ ಹಾಗೂ ಅಕ್ಕ ಇಬ್ಬರನ್ನೂ ಕಳೆದುಕೊಂಡು ಮಗು ಅನಾಥವಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


