ಉಳ್ಳಾಲ: ರೈ ಲು ಹಳಿಯಲ್ಲಿ ಕಿಡಿಗೇಡಿಗಳು ಜಲ್ಲಿಕಲ್ಲು ಇಟ್ಟ ಘಟನೆ ತೊಕ್ಕೊಟ್ಟು ಓವರ್‌ಬ್ರಿಡ್ಜ್ ಗಣೇಶ್ ನಗರ ಬಳಿ ಶನಿವಾರ ರಾತ್ರಿ ನಡೆದಿದ್ದು, ರೈಲು ಸಂಚರಿಸಿದಾಗ ಆದ ಶಬ್ದಕ್ಕೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯು ಗಣೇಶ್ ನಗರ ಮತ್ತು ಕಾಪಿಕಾಡು ನಡುವಿನ ಹಳಿಯಲ್ಲಿ ನಡೆದಿದೆ ಎನ್ನಲಾಗಿದೆ. ಮಂಗಳೂರಿನಿಂದ ಕೇರಳ ಕಡೆಗೆ ರೈಲು ಸಾಗಿದಾಗ ಸಣ್ಣ ಸದ್ದು ಕೇಳಿಸಿದ್ದು, ಕೇರಳದಿಂದ ಮಂಗಳೂರು ಕಡೆಗೆ ಸಂಚರಿಸಿದ ಸಂದರ್ಭದಲ್ಲಿ ಉಂಟಾದ ದೊಡ್ಡ ಸದ್ದಿನಿಂದ ಸ್ಥಳೀಯ ಮನೆಗಳಲ್ಲಿ ಕಂಪನ ಉಂಟಾಗಿದೆ. ಈ ವೇಳೆಯಲ್ಲಿ ಸ್ಥಳೀಯರ ಜನರು ಶಬ್ಧ ಬಂದ ಕಡೆಗೆ ಟಾರ್ಚ್‌ಲೈಟ್ ಹಿಡಿದು ಹಳಿ ಸಮೀಪ ಬಂದು ನೋಡಿದಾಗ ಜಲ್ಲಿ ಕಲ್ಲು ಹುಡಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ರಾತ್ರಿ 8 ಗಂಟೆ ಸುಮಾರಿಗೆ ಕೊರಗಜ್ಜನ ಅಗೆಲು ಮುಗಿಸಿ ಮರಳುತ್ತಿದ್ದ ಮಹಿಳೆಯರು ಹಳಿಯಲ್ಲಿ ಇಬ್ಬರು ಆಗಂತುಕರನ್ನು ಕಂಡಿದ್ದರು. ಅವರದೇ ಕೃತ್ಯ ಇದಾಗಿರಬೇಕು ಎಂದು ಶಂಕಿಸಲಾಗಿದೆ.
ರೈಲು ಹಳಿಯಲ್ಲಿ ಜಲ್ಲಿಕಲ್ಲನ್ನು ಸಾಲಾಗಿ ಜೋಡಿಸಿದ್ದರು. 40 ವರುಷಗಳಿಂದ ಪ್ರಥಮ ಬಾರಿಗೆ ಇಷ್ಟು ದೊಡ್ಡ ಸದ್ದು ಕೇಳಿರುವ ಅನುಭವ ಆಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಪದ್ಮ.
ಈ ಕುರಿತಂತೆ ಸ್ಥಳೀಯ ನಿವಾಸಿ ರಾಜೇಶ್ ಅವರು ರೈಲ್ವೇ ಸಲಹಾ ಸಮಿತಿ ಸದಸ್ಯರಾದ ಆನಂದ ಶೆಟ್ಟಿ ಭಟ್ನಗರ ಮತ್ತು ಗೋಪಿನಾಥ್ ಬಗಂಬಿಲ ಅವರಿಗೆ ಮಾಹಿತಿ ನೀಡಿದ್ದು, ರೈಲ್ವೇ ಸಲಹಾ ಸಮಿತಿ ಸದಸ್ಯರ ದೂರಿನಂತೆ ಉಳ್ಳಾಲ ಪೊಲೀಸರು ಮತ್ತು ರೈಲ್ವೇ ಸಿಬಂದಿ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು ಎನ್ನಲಾಗಿದೆ.