ನವದೆಹಲಿ: ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆಯೋಜಿಸಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ಶನಿವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.
ಮಾಹಿತಿಯ ಪ್ರಕಾರ, ತಡರಾತ್ರಿಯಿಂದಲೇ ಗುರುಗ್ರಾಮದಲ್ಲಿರುವ ಧ್ರುವ್ ರಾಠಿ ಅವರ ನಿವಾಸದ ಹೊರಗೆ 50ಕ್ಕೂ ಹೆಚ್ಚು ಪೊಲೀಸರು ಕಾವಲು ಕಾಯುತ್ತಿದ್ದರು. ಶನಿವಾರ ಬೆಳಗ್ಗೆ 7:48ರ ಸುಮಾರಿಗೆ ಅವರ ನಿವಾಸದಲ್ಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮುನ್ನ ಧ್ರುವ್ ರಾಠಿ ಅವರ ಪೌರತ್ವ, ವಲಸೆ ಸ್ಥಿತಿ ಹಾಗೂ ವೀಸಾ ನಿಯಮಗಳ ಪಾಲನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಸಲ್ಲಿಕೆಯಾಗಿತ್ತು. ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರು ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದು ಈ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ.
ಧ್ರುವ್ ರಾಠಿ ಅವರು ಜರ್ಮನ್ ಪೌರತ್ವ ಹೊಂದಿದ್ದಾರೆ ಎನ್ನಲಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತಕ್ಕೆ ಪ್ರವೇಶಿಸಲು ಬಳಸಿದ ಪಾಸ್ಪೋರ್ಟ್, ಅವರ ಪ್ರಸ್ತುತ ರಾಷ್ಟ್ರೀಯತೆ, ವೀಸಾ ಅಥವಾ ಓಸಿಐ ಕಾರ್ಡ್ನ ವಿವರಗಳು ಹಾಗೂ ಭಾರತಕ್ಕೆ ಆಗಮಿಸಿದ ಉದ್ದೇಶವನ್ನು ಪರಿಶೀಲಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಅಲ್ಲದೆ, ವಿದೇಶಿ ಪ್ರಜೆಗಳು ಭಾರತದ ಸಾಂವಿಧಾನಿಕ ಮತ್ತು ಶಾಸನಬದ್ಧ ಸಂಸ್ಥೆಗಳಿಗೆ ಸಂಬಂಧಿಸಿದ ರಾಜಕೀಯ ಸಭೆ ಹಾಗೂ ಪ್ರತಿಭಟನೆಗಳಲ್ಲಿ ಭಾಗವಹಿಸಲು ಮತ್ತು ಭಾಷಣ ಮಾಡಲು ಇರುವ ಕಾನೂನು ನಿಯಮಗಳೇನು ಎಂಬುದನ್ನೂ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಲಾಗಿದೆ.
ಧ್ರುವ್ ರಾಠಿ ಅವರು ವಿದೇಶಿಯರ ಕಾಯ್ದೆ-1946, ವೀಸಾ ಷರತ್ತುಗಳು, ವಲಸೆ ನಿಯಮಗಳು ಅಥವಾ ಓಸಿಐ ನಿಯಮಗಳನ್ನು ಉಲ್ಲಂಘಿಸಿರುವುದು ತನಿಖೆಯಲ್ಲಿ ದೃಢಪಟ್ಟರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾಸ್ಕರ್ ರಾವ್ ಒತ್ತಾಯಿಸಿದ್ದಾರೆ.


