ಮಂಗಳೂರು: ರೈಲು ಪ್ರಯಾಣದ ವೇಳೆ ಕಳವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್, ಚಿನ್ನದ ಸರ ಹಾಗೂ ಕೈಗಡಿಯಾರ ಸೇರಿದಂತೆ ವಿವಿಧ ಸೊತ್ತುಗಳನ್ನು ಟಿಕೆಟ್ ತಪಾಸಕರ (TTE) ಜಾಗರೂಕತೆಯಿಂದ ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಹೊಳೆನರಸೀಪುರದಿಂದ ಮಂಗಳೂರು ಜಂಕ್ಷನ್‌ಗೆ (ರೈಲು ಸಂಖ್ಯೆ 16585) ಪ್ರಯಾಣಿಸುತ್ತಿದ್ದ ಅಭಿಷೇಕ್ ಎಂಬವರ ಬ್ಯಾಗ್ ಕಳವಾಗಿತ್ತು. ಈ ಕುರಿತು ಅವರು ‘ರೈಲ್‌ಮದದ್’ ಸಹಾಯವಾಣಿಯಲ್ಲಿ ದೂರು ನೀಡಿದ್ದರು.
ಮತ್ತೊಂದು ರೈಲಿನಲ್ಲಿ (ಸಂಖ್ಯೆ 17302) ಕರ್ತವ್ಯದಲ್ಲಿದ್ದ ಟಿಟಿಇ ಚಂದ್ರ ನಾಯಕ್ ಅವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಸವರಾಜ ಎಂಬಾತನನ್ನು ತಡೆದು ವಿಚಾರಿಸಿ, ಕೆ.ಆರ್. ನಗರ ಆರ್‌ಪಿಎಫ್ ಸಿಬ್ಬಂದಿಗೆ ಒಪ್ಪಿಸಿದರು. ವಿಚಾರಣೆ ವೇಳೆ ಆರೋಪಿಯು ಕಳವು ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಜಿಆರ್‌ಪಿ ಪೊಲೀಸರು ಕಳುವಾದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡು ಅಭಿಷೇಕ್ ಅವರಿಗೆ ಮರಳಿಸಿದ್ದಾರೆ. ಟಿಟಿಇ ಕಾರ್ಯಕ್ಕೆ ನೈಋತ್ಯ ರೈಲ್ವೆ ಮೈಸೂರು ವಿಭಾಗ ಮೆಚ್ಚುಗೆ ವ್ಯಕ್ತಪಡಿಸಿದೆ.


