
ಮಂಗಳೂರು: ಬೈಕ್ ಗೆ ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಕೂಳೂರಿನಲ್ಲಿ ನಡೆದಿದೆ. ಬೆಟ್ಟಂಪಾಡಿ ಗ್ರಾಮದ ಕಲೆಂಜಿಲ ಸೀತಾರಾಮ ಪೂಜಾರಿಯವರ ಪುತ್ರ ದೀಕ್ಷಿತ್ ಪೂಜಾರಿ (23) ಮೃತ ಯುವಕ.
ದೀಕ್ಷಿತ್ ಮಂಗಳೂರಿನ ಜೆಎಸ್‌ಡಬ್ಲ್ಯೂ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ಮಂಗಳೂರಿನ ಪಿಜಿಯಲ್ಲಿರುತ್ತಿದ್ದರು. ಎ.9 ರಂದು ಮಧ್ಯಾಹ್ನ ಊಟದ ವಿರಾಮದ ವೇಳೆ ತನ್ನ ಬಜಾಜ್ ಪಲ್ಸರ್ ಬೈಕ್‌ನಲ್ಲಿ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೆರಳುತ್ತಿದ್ದ ಸಂದರ್ಭ ಕೂಳೂರು ಸೇತುವೆಯಿಂದ ಮುಂದೆ ಸಾಗಿ ಬಸ್ ತಂಗುದಾಣ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಬಲ ಭಾಗದಲ್ಲಿ ಬಂದ ಕಾರನ್ನು ತಪ್ಪಿಸಲು ಎಡ ಭಾಗದಿಂದ ಬಸ್ ಚಲಾಯಿಸಿಕೊಂಡು ಬಂದು ದೀಕ್ಷಿತ್ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ . ಈ ವೇಳೆ ಬೈಕ್ ಸವಾರ ದೀಕ್ಷಿತ್ ಅಪಘಾತದ ತೀವ್ರತೆಗೆ ರಸ್ತೆಗೆ ಎಸೆಯಲ್ಪಟಿದ್ದು ಆತನ ದೇಹದ ಮೇಲೆಯೇ ಬಸ್ ಹರಿದು ಹೋಗಿ ತೀವ್ರ ಗಾಯಗೊಂಡಿದ್ದರು. ಕೂಡಲೇ ಎ ಜೆ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಲ್ಲಿ ಮೃತಪಟ್ಟಿದ್ದಾರೆ.
ಮೃತರ ಸಹೋದರ ರಕ್ಷಿತ್ ನೀಡಿದ ದೂರಿನಂತರ ಖಾಸಗಿ ಬಸ್ ಚಾಲಕ ಮಹಮ್ಮದ್ ರಫೀಕ್ ವಿರುದ್ಧ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


