ಬಂಟ್ವಾಳ: ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ನಿರೂಪಕ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ಏಪ್ರಿಲ್ 10ರಂದು ರಾತ್ರಿ ನಡೆದಿದೆ. ಫರಂಗಿಪೇಟೆ ಅಬ್ಬೆಟ್ಟು ನಿವಾಸಿ ಅಶ್ವಿತ್ (32) ಮೃತಪಟ್ಟ ದುರ್ದೈವಿ.
ಅಶ್ವಿತ್ ಉತ್ತಮ ನಿರೂಪಕರಾಗಿ ಸ್ಥಳೀಯವಾಗಿ ಗುರುತಿಸಿಕೊಂಡಿದ್ದರು. ನಾಯಿಲದಲ್ಲಿರುವ ತನ್ನ ಸಂಬಂಧಿಕರ ಮನೆಯ ಮದರಂಗಿ ಕಾರ್ಯಕ್ರಮದಲ್ಲಿ ಅಶ್ವಿತ್ ಅವರಿಗೆ ನಿರೂಪಣೆಯ ಜವಾಬ್ದಾರಿ ನೀಡಲಾಗಿತ್ತು. ಅದರಂತೆ ಶುಕ್ರವಾರ ರಾತ್ರಿ (ಏಪ್ರಿಲ್ 10) ಅವರು ಅತ್ಯಂತ ಉತ್ಸಾಹದಿಂದ ವೇದಿಕೆ ಏರಿ ಮಾತು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅವರು ತೀವ್ರ ಅಸ್ವಸ್ಥಗೊಂಡು ಇದ್ದಕ್ಕಿದ್ದಂತೆ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ.
ಅಶ್ವಿತ್ ಕುಸಿದು ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಸಂಬಂಧಿಕರು ಹಾಗೂ ಸಾರ್ವಜನಿಕರು ತಕ್ಷಣ ಅವರನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಪರೀಕ್ಷಿಸಿದ ವೈದ್ಯರು, ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಹೃದಯಾಘಾತವೇ ಈ ಸಾವಿಗೆ ಕಾರಣ ಎನ್ನಲಾಗಿದೆ.


