
ಮಂಗಳೂರು ಲಿಟ್ ಫೆಸ್ಟ್ ನ 2026ನೇ ಆವೃತ್ತಿಯ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತರು, ಖ್ಯಾತ ಇತಿಹಾಸಕಾರ್ತಿ, ರಾಜ್ಯಸಭಾ ಸದಸ್ಯರಾದ ಮೀನಾಕ್ಷಿ ಜೈನ್ ಆಯ್ಕೆಯಾಗಿದ್ದಾರೆ. ಜ.10 ಮತ್ತು ಜ.11ರಂದು ಡಾ. ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿರುವ 8ನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯೋಜಕ ಸಂಸ್ಥೆ ಭಾರತ್ ಫೌಂಡೇಷನ್ ತಿಳಿಸಿದೆ.
ಭಾರತದ ಪರಿಕಲ್ಪನೆಯನ್ನು ಸಾರುವ ಮಂಗಳೂರು ಲಿಟ್ ಫೆಸ್ಟ್ ಯಶಸ್ವಿಯಾಗಿ ಏಳು ಆವೃತ್ತಿಗಳನ್ನು ಪೂರೈಸಿ ಈ ಬಾರಿ ಎಂಟನೇ ಆವೃತ್ತಿಗೆ ಕಾಲಿಟ್ಟಿದೆ. ಜ.10ರಂದು ಬೆಳಿಗ್ಗೆ ಮಂಗಳೂರು ಲಿಟ್ ಫೆಸ್ಟ್ ಉದ್ಘಾಟನೆಗೊಳ್ಳಲಿದ್ದು, ಗಣ್ಯರಾದ ಶತಾವಧಾನಿ ಡಾ. ಆರ್. ಗಣೇಶ್, ಮೀನಾಕ್ಷಿ ಜೈನ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ರವಿ. ಎಸ್ (ಮಿಥಿಕ್ ಸೊಸೈಟಿ), ಡಾ. ಅಜಕ್ಕಳ ಗಿರೀಶ್ ಭಟ್ ಹಾಜರಿರುತ್ತಾರೆ.
ಲಿಟ್ ಫೆಸ್ಟ್ ನಲ್ಲಿ ವಿಕ್ರಂ ಸೂದ್ ಮತ್ತು ಡಾ. ಶ್ರೀಪರ್ಣಾ ಪಾಠಕ್ ವಿಶ್ವ ಮಟ್ಟದ ಪವರ್ ಗೇಮ್ ವಿಚಾರವಾಗಿ ಸಂವಾದ ನಡೆಸಲಿದ್ದಾರೆ. ರುಚಿರಾ ಕಾಂಬೋಜ್, ಡಾ. ಸ್ವಸ್ತಿ ರಾವ್, ಪತ್ರಕರ್ತ ಆದಿತ್ಯ ರಾಜ್ ಕೌಲ್ ಮತ್ತು ಡಾ. ಬಿಡಂದ ಚೆಂಗಪ್ಪ ಅವರು ಭಾರತದ ನೆರೆಹೊರೆಯ ಸಂಬಂಧಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ತಿರುಮೂರ್ತಿ, ಡಾ. ಶ್ರೀರಾಮ್ ಚೌಲಿಯಾ, ವಿಜಿತ್ ಕನಹಳ್ಳಿ ಜಾಗತೀಕರಣಗೊಂಡ ವಿಶ್ವದಲ್ಲಿ ಭಾರತೀಯ ಚಿಂತನೆ ಎಂಬ ವಿಚಾರದ ಕುರಿತು ಮಾತನಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶ ಲಭ್ಯವಿದೆ. ವಿಶೇಷವಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಇಲ್ಲಿ ಅನೇಕ ಆಕರ್ಷಕ ವಿಭಾಗಗಳನ್ನು ರೂಪಿಸಲಾಗಿದೆ.


