ಸುಳ್ಯ; ನಾವು ವಿದ್ಯಾರ್ಥಿಗಳು ನಮ್ಮ ಬಳಿ ಫೀಸ್ ಕಟ್ಟಲು ಹಣವಿಲ್ಲವೆಂದು ಹೇಳಿ ಕದ್ದ ಚಿನ್ನವನ್ನು ಮಾರಾಟ ಮಾಡಿ ದಂಪತಿ ಅಂದರ್ ಆದ ಘಟನೆ ಸುಳ್ಯದಲ್ಲಿ ನಡೆದಿದೆ.
ಕೇರಳದಿಂದ 3 ಪವನ್ ಚಿನ್ನದ ಸರವನ್ನು ಕದ್ದ ಕಿಲಾಡಿ ಸರ್ಜಾನ್ ದಂಪತಿ ಅದನ್ನು 22 ದಿನಗಳ ಹಿಂದೆ ಸುಳ್ಯದ ಚಿನ್ನದ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದರು. ಅಲ್ಲದೇ ನಾವು ವಿದ್ಯಾರ್ಥಿಗಳು ನಮ್ಮ ಬಳಿ ಫೀಸ್ ಕಟ್ಟಲು ಹಣವಿಲ್ಲವೆಂದು ಹೇಳಿ ಅದನ್ನು ಮಾರಾಟ ಮಾಡಿದ್ದರು. ಅಂಗಡಿ ಮಾಲೀಕರು ಕಿಲಾಡಿ ದಂಪತಿಗೆ 1 ಲಕ್ಷದ 43 ಸಾವಿರ ರೂಪಾಯಿ ನೀಡಿದ್ದರು
ಆದರೆ ಇದೀಗ ಈ ಸರದ ಹಿಂದಿನ ಅಸಲಿಯತ್ತು ಬಯಲಾಗಿದ್ದು ದಂಪತಿ ಕಳ್ಳರು ಅನ್ನೋದು ಗೊತ್ತಾಗಿದೆ. ಕೇರಳ ಪೊಲೀಸರು ಆರೋಪಿ ಸರ್ಜಾನ್ ಇದೇ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಅದರಂತೆ ಸೆಪ್ಟೆಂಬರ್ 2 ರಂದು ಸುಳ್ಯದ ಖಾಸಗಿ ಬಸ್ ಸ್ಟ್ಯಾಂಡ್ ಬಳಿಯಿರುವ ಚಿನ್ನದಂಗಡಿಗೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಿದ್ದಾರೆ. ಇದೀಗ ಕೇರಳ ಪೊಲೀಸರು ಬಂದು ವಿಚಾರಿಸಿ ಚಿನ್ನವನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಈ ಹಿಂದೆಯೂ ಆತ ಮೂರು ಕಡೆ ಹೀಗೆಯೇ ವಂಚಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಎಂದು ತಿಳಿದು ಬಂದಿದೆ. ಸ್ಥಳ ಮಹಜರಿಗೆ ಪೊಲೀಸರ ಜೊತೆ ಬಂದಿರುವ ಕಳ್ಳ ವಾಪಸ್ ನಾನು ಹಣ ನೀಡುವುದಾಗಿ ಜ್ಯುವೆಲರ್ಸ್ ಮಾಲೀಕರಿಗೆ ಹೇಳಿದ್ದಾನೆ ಎನ್ನಲಾಗಿದೆ.