ಮಂಗಳೂರು: ಇಲ್ಲಿನ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಬಹುಮಹಡಿ ಕಟ್ಟಡಗಳ ಫ್ಲ್ಯಾಟ್‌ಗಳಿಗೆ ಅವುಗಳ ವಿಸ್ತೀರ್ಣಕ್ಕೆ ತಕ್ಕಂತೆ ಮಾಸಿಕ ನಿರ್ವಹಣಾ ವೆಚ್ಚ ವಸೂಲಿ ಮಾಡಬೇಕೆಂದು ಆದೇಶ ನೀಡಿದೆ.
2018ರಿಂದ 2021ರ ವರೆಗೆ ಮಂಗಳೂರು ನಗರದ ಕೊಟ್ಟಾರದ ಬಳಿ ಇರುವ ಬಹುಮಹಡಿ ಕಟ್ಟಡವೊಂದರ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆ ಕಟ್ಟಡ ಮಾಲಕರು ತಮ್ಮ ಫ್ಲ್ಯಾಟಿನ ವಿಸ್ತೀರ್ಣಕ್ಕೆ ಅನುಸಾರವಾಗಿ ಮತ್ತು ಅವಿಭಜಿತ ಹಕ್ಕಿಗನುಗುಣವಾಗಿ ಮಾಸಿಕ ನಿರ್ವಹಣ ವೆಚ್ಚ ಪಾವತಿಸುತ್ತಿದ್ದರು. ಆದರೆ ಕಟ್ಟಡದ ಅಸೋಸಿಯೇಷನ್ 2021ರಲ್ಲಿ ಎಲ್ಲ ಫ್ಲ್ಯಾಟ್ ಮಾಲಕರು ಏಕರೂಪದ ಮಾಸಿಕ ನಿರ್ವಹಣ ವೆಚ್ಚ ಕೊಡಬೇಕಾಗಿ ನಿರ್ಣಯವನ್ನು ತೆಗೆದುಕೊಂಡಿತ್ತು. ಈ ನಿರ್ಣಯದ ವಿರುದ್ಧ ನ್ಯಾಯಾಲಯದಲ್ಲಿ ಒಂದು ಫ್ಲ್ಯಾಟ್‌ನ ಮಾಲಕ ಚಂದ್ರಹಾಸ ಅಮೀನ್ ಅವರು ದಾವೆ ಹೂಡಿದ್ದರು.
ಮಂಗಳೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ವಾದಿ ಮತ್ತು ಪ್ರತಿವಾದಿಗಳು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಸಾಕ್ಷಿ ವಿಚಾರಣೆಯನ್ನು ಪರಿಗಣಿಸಿ, 1972ನೇ ಅಪಾರ್ಟ್‌ಮೆಂಟ್ ಓನರ್‌ಶಿಪ್ ಆ್ಯಕ್ಟ್ ಪ್ರಕಾರ ಮಾಲಕರು ತಮ್ಮ ಫ್ಲ್ಯಾಟ್‌ನ ವಿಸ್ತೀರ್ಣ ಅಥವಾ ಶೇಕಡಾವಾರು ಅವಿಭಜಿತ ಹಕ್ಕುಗಳ ಸಾರವಾಗಿ ಮಾಸಿಕ ನಿರ್ವಹಣ ವೆಚ್ಚ ಪಾವತಿಸಲು ಬದ್ಧರು ಎಂದು ಆದೇಶ ನೀಡಿದೆ. ಅಲ್ಲದೆ ಎಲ್ಲ ಫ್ಲ್ಯಾಟ್‌ಗಳ ಮಾಲಕರು ಏಕರೂಪದ ವಂತಿಗೆಯನ್ನು ನೀಡಬೇಕೆಂದು ಅಸೋಸಿಯೇಷನ್ ಮಾಡಿದ ನಿರ್ಣಯವನ್ನು ನ್ಯಾಯಾಲಯ ವಜಾಗೊಳಿಸಿದೆ.