Saturday, June 27, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಚಿರತೆ ಮೃತದೇಹ ಪತ್ತೆ ಪ್ರಕರಣ; ವನ್ಯಜೀವಿ ವಿಭಾಗದಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ : ಚಿರತೆ ಮೃತದೇಹ ಪತ್ತೆ ಪ್ರಕರಣ; ವನ್ಯಜೀವಿ ವಿಭಾಗದಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ಕಾಲುಗಳನ್ನು ಕತ್ತರಿಸಿದ ಕೊಳೆತ ರೀತಿಯಲ್ಲಿ ಚಿರತೆಯೊಂದು ಸವಣಾಲು ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಏ.12 ರಂದು ಪತ್ತೆಯಾಗಿತ್ತು.‌ಈ ಬಗ್ಗೆ ಪ್ರಕರಣ ದಾಖಲಾಗಿದ್ದು.‌ ಚಿರತೆಯ ಸ್ಯಾಂಪಲ್ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲು ಮುಂದಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಮೀಸಲು ಅರಣ್ಯ ಪ್ರದೇಶ ಇತ್ತಿಲಪೇಲ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆಯ ಮೃತ ದೇಹ ನಾಲ್ಕು ಕಾಲುಗಳನ್ನು ತುಂಡರಿಸಿದ ರೀತಿಯಲ್ಲಿ ಪತ್ತೆಯಾಗಿತ್ತು.  ಏ.11 ರಂದು ಸಂಜೆ ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್.ಎಫ್.ಓ ಶರ್ಮಿಷ್ಠಾ ಅವರಿಗೆ ಮಾಹಿತಿ ಬಂದಿದ್ದು. ಏ.12 ರಂದು ಸ್ಥಳಕ್ಕೆ ಹೋಗಿ ಮಹಜರು ನಡೆಸಿ ಕಳೇಬರವನ್ನು ಸಂಗ್ರಹಿಸಿ ಬೆಳ್ತಂಗಡಿ ಪಶು ಆಸ್ಪತ್ರೆಯಲ್ಲಿಡಲಾಗಿತ್ತು. ಕಾರ್ಕಳ ವನ್ಯಜೀವಿ ವಿಭಾಗದ ಡಿಎಫ್ಓ ಶಿವರಾಮ ಬಾಬು ಕೂಡ ಆಗಮಿಸಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ 12 ರಂದು ರಾತ್ರಿ ಬೆಳ್ತಂಗಡಿ ವನ್ಯಜೀವಿ ವಿಭಾಗದಲ್ಲಿ 1972 ನೇ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಅಪರಿಚಿತರು ಪ್ರಾಣಿ ಬೇಟೆಯಾಡಿ ಚಿರತೆ ಸಾಯಿಸಿರುವುದಾಗಿ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಕರಣದ ವರದಿಯನ್ನು ನೀಡಲಾಗಿದೆ.

ದೇಹವಿದ್ದ ಚಿರತೆಯ ಫೋಟೋ ಪತ್ತೆ : ಏ.11 ರಂದು ಸಾಮಾಜಿಕ ಜಾಲತಾಣಗಳಲ್ಲಿ ಚಿರತೆ ಕಲ್ಲಿನ ಮೇಲೆ ಕಾಲುಗಳನ್ನು ಕತ್ತರಿಸಿದ ರೀತಿಯಲ್ಲಿ ಸತ್ತ ಅವಶೇಷದ ಫೋಟೋ ವೈರಲ್ ಅಗಿತ್ತು. ಏ.12 ರಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಅಧಿಕಾರಿಗಳು ,ಪಶು ವೈದ್ಯರು ಹೋದಾಗ ಅಲ್ಲಿ ಚಿರತೆಯ ಕಳೇಬರ ಮಾತ್ರ ಪತ್ತೆಯಾಗಿತ್ತು. ಫೋಟೋ ಮತ್ತು ಮಹಜರು ವೇಳೆ ಇದ್ದ ಪ್ರಾಣಿಯ ಕುರುಹುಗಳು ಬದಲಾಗಿತ್ತು. ಹಲವು ತಿಂಗಳ ಹಿಂದೆ ಫೋಟೋ ತೆಗೆಯಲಾಗಿದೆ. ಮಾಹಿತಿ ತಡವಾಗಿ ಬಂದಿದೆ. ಈ ಫೋಟೋ ಯಾರು ,ಯಾವಾಗ ತೆಗೆದಿದ್ದರು ಎಂಬುವುದನ್ನು ತನಿಖೆ ನಡೆಸುತ್ತಿರುವುದಾಗಿ ಡಿಎಫ್ಓ ಶಿವರಾಮ ಬಾಬು ಮಾಹಿತಿ ತಿಳಿಸಿದರು.

ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗೆ ರವಾನೆ: ಬೆಳ್ತಂಗಡಿ ಪಶು ಇಲಾಖೆಯಲ್ಲಿ ಸಂಗ್ರಹಿಸಲಾಗಿದ್ದ ಚಿರತೆಯ ಎಲುಬುಗಳನ್ನು ಬೆಳ್ತಂಗಡಿ ಪಶು ಇಲಾಖೆ ಕಚೇರಿಯಲ್ಲಿ ಏ.15 ರಂದು ಡಿಎಫ್ಓ ಶಿವರಾಮ ಬಾಬು , ಎನ್.ಜಿ.ಓ ಗಳಾದ ಚಿಕ್ಕಮಗಳೂರು ಎನ್.ಟಿ.ಸಿ.ಯ ವೀರೇಶ್ , ಚೀಫ್ ವೈಲ್ಡ್ ಲೈಫ್ ವಾರ್ಡನ್ ರಾಮಚಂದ್ರ ಭಟ್, ಬೆಳ್ತಂಗಡಿ ಪಶು ವೈದ್ಯರಾದ ಡಾ.ರವಿ ಕುಮಾರ್.ಎಮ್, ಬೆಳ್ತಂಗಡಿ ಆರ್.ಎಫ್.ಓ ಶರ್ಮಿಷ್ಠಾ ನೇತೃತ್ವದಲ್ಲಿದಲ್ಲಿ ಪ್ರತಿಯೊಂದು ಸ್ಯಾಂಪಲಿಗೆ ನಂಬರ್ ಹಾಕಿ ಮಹಜರು ನಡೆಸಿ ಸ್ಯಾಂಪಲ್ ಬಾಕ್ಸ್ ನಲ್ಲಿ ಹಾಕಿ ಪ್ಯಾಕ್ ಮಾಡಿ ಚೆನ್ನೈ ಅಥವಾ ಹೈದರಾಬಾದ್ ಗೆ  ಪ್ರಯೋಗಲಯಕ್ಕೆ ಎರಡು ದಿನದಲ್ಲಿ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಲೆ ಬುರುಡೆ ಒಂದು ಭಾಗ ಮಾತ್ರ ಪತ್ತೆ: ಚಿರತೆಯ ಯಾವುದೇ ಮಾಂಸಗಳು ಪತ್ತೆಯಾಗಿಲ್ಲ, ಕಳೇಬರ ಮಾತ್ರ ಸಿಕ್ಕಿದ್ದು ಇದರಲ್ಲಿ ತಲೆ ಬರುಡೆಯ ಮೇಲಿನ ಒಂದು ಭಾಗ ಮಾತ್ರ ದೊರಕಿದ್ದು. ಯಾವ ಕಾರಣ ಎಂಬುವುದು ತನಿಖೆಯಿಂದ ತಿಳಿದುಬರಬೇಕಾಗಿದೆ ಎಂದು ವನ್ಯಜೀವಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯೋಗಾಲಯಲ್ಲಿ ಪರೀಕ್ಷೆ: ಚಿರತೆಯ ಮೂಲೆಗಳ ಸ್ಯಾಂಪಲ್ ಸಂಗ್ರಹಿಸಿ ಚೆನ್ನೈ ಅಥವಾ ಹೈದರಾಬಾದ್  ಪ್ರಯೋಗಾಲಯಕ್ಕೆ ಕಳುಹಿಸಿದ ಬಳಿಕ ಚಿರತೆಗೆ ಎಷ್ಟು ಪ್ರಾಯವಾಗಿತ್ತು, ಪ್ರಾಣಿಯ ಲಿಂಗ ,ಯಾವ ಜಾತಿಯ ಪ್ರಾಣಿ ಎಂಬುವುದನ್ನು ಪ್ರಯೋಗಾಲಯದಲ್ಲಿ ಧೃಡಪಡಿಸಿ ವರದಿ ನೀಡಲಿದ್ದಾರೆ.

ಗುಂಡು ಹಾರಿಸಿ ಕಾಲು ಕತ್ತರಿಸಿರುವ ಶಂಕೆ:  ಯಾರೋ ದುಷ್ಕರ್ಮಿಗಳು ಕೆಲ ತಿಂಗಳ ಹಿಂದೆ ಬೇಟೆಯಾಡಲು ಬಂದು ಚಿರತೆಯ ತಲೆಗೆ ಗುಂಡು ಹಾರಿಸಿ ಸಾಯಿಸಿ ಕಾಲಿನ ಉಗುರುಗಳಿಗಾಗಿ ಕಾಲನ್ನು ತುಂಡರಿಸಿಕೊಂಡು ಹೋಗಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ. ಈ ಒಂದು ದುಷ್ಕೃತ್ಯದ ಹಿಂದೆ ದೊಡ್ಡ ಮಾಫೀಯಾ ಇರುವ ಶಂಕೆ ವ್ಯಕ್ತವಾಗುತ್ತಿದೆ. ಈ ಪ್ರಕರಣವನ್ನು ವನ್ಯಜೀವಿ ವಿಭಾಗದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು.‌ ಪ್ರಕರಣ ಭೇದಿಸಲು ಡಿಎಫ್ಓ ಶಿವರಾಮ ಬಾಬು ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಮೀಸಲು ಅರಣ್ಯದತ್ತ ಸುತ್ತಮುತ್ತ ರಾತ್ರಿ ಓಡಾಟ: ಹಲವಾರು ಸಮಯಗಳಿಂದ ಈ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆ ಹಾಗೂ ನದಿಯಲ್ಲಿ ಮೀನು ಹಿಡಿಯಲು ಅಪರಿಚಿತ ಜನರು ಬರುತ್ತಿರುವ ಬಗ್ಗೆ ಮಾಹಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಇದ್ದರೂ ಸುಮ್ಮನಿದ್ದಾರೆ ಎಂಬುವುದು ಸ್ಥಳೀಯರ ಆರೋಪವಾಗಿದೆ. ಈ ಬಗ್ಗೆ ಬೆಳ್ತಂಗಡಿ ವನ್ಯಜೀವಿ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!