ಮಂಗಳೂರು: ಮರೋಳಿಯಲ್ಲಿ ಭಾನುವಾರ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಅದೇ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದ್ದು, ಇಲ್ಲಿನ ರೆಡ್ ಬಿಲ್ಡಿಂಗ್ ಎಂಬಲ್ಲಿ ಬುಧವಾರ ಮಧ್ನಾಹ್ನ ಸುಮಾರು 2.30ಕ್ಕೆ ಚಿರತೆ ಕಾಣಿಸಿಕೊಂಡಿದೆ.
ಸ್ಥಳೀಯರಾದ ಸುನೀತಾ ಎಂಬುವವರ ಮನೆ ಬಳಿ ಚಿರತೆ ಕಂಡುಬಂದಿದ್ದು, ಭಯಗೊಂಡ ಅವರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.ಚಿರತೆ ಕಾಣಿಸಿಕೊಂಡ ವೇಳೆ ಸ್ಥಳೀಯರು ಮೊಬೈಲ್‌ನಲ್ಲಿ ವೀಡಿಯೋ ಸೆರೆ ಹಿಡಿದಿದ್ದರು. ಅರಣ್ಯ ಇಲಾಖೆಯ ಸುಮಾರು 15 ಮಂದಿ ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆಗಾಗಿ ಹುಡುಕಾಟ ನಡೆಸಿದ್ದರು. ಕನಪದವು, ಮಾರ್ತ ಕಂಪೌಂಡ್, ಬಲ್ಲಾಳ್‌ಗುಡ್ಡೆ ವ್ಯಾಪ್ತಿಯಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಅದೇ ಸ್ಥಳದಲ್ಲಿ ಬೋನು ಇಟ್ಟಿದ್ದರು. ಎರಡು ದಿನವಾದರೂ ಚಿರತೆ ಬೋನಿಗೆ ಬೀಳಲಿಲ್ಲ.
ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ಅವರ ಪ್ರತಿಕ್ರಿಯಿಸಿ , ಈಗಾಗಲೇ ಮರೋಳಿಯಲ್ಲಿ ಚಿರತೆ ಪತ್ತೆಯಾದ ಸ್ಥಳದ ಬಳಿ ಮತ್ತೆ ಬುಧವಾರ ಮಧ್ಯಾಹ್ನ ಚಿರತೆ ಪ್ರತ್ಯಕ್ಷ ಬಂದಿದೆ. ಹೆಜ್ಜೆ ಗುರುತು ಪತ್ತೆಯಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಬೋನು ಇಡಲಾಗಿದೆ ಎಂದು ಹೇಳಿದ್ದಾರೆ.


