ಕುಂದಾಪುರ; ಪ್ರವಾಸಕ್ಕೆ ಹೊರಟಿದ್ದ ಕಾಲೇಜು ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತ್ರಾಸಿಯ ಮರವಂತೆ ಬೀಚ್ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಬಸ್ಸಿನ ಕ್ಲೀನರ್ ಮತ್ತು ಅಡುಗೆ ಸಹಾಯಕ ಸಾವನ್ನಪ್ಪಿದವರು.
ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ರಂಭಾಪುರಿ ಕಾಲೇಜಿನ 50 ಮಂದಿ ಬಿ.ಕಾಂ ವಿದ್ಯಾರ್ಥಿಗಳು ಎರಡು ದಿನಗಳ ಪ್ರವಾಸಕ್ಕೆಂದು ಹೊರಟಿದ್ದರು. ಮುರ್ಡೇಶ್ವರ ದರ್ಶನ ಮುಗಿಸಿ ಉಡುಪಿ ಕಡೆಗೆ ತೆರಳುತ್ತಿದ್ದಾಗ, ಮರವಂತೆ ಬೀಚ್ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯಲ್ಲಿದ್ದ ಗ್ಯಾಸ್ ಟ್ಯಾಂಕರ್‌ಗೆ ಬಲವಾಗಿ ಢಿಕ್ಕಿ ಹೊಡೆದು, ನಂತರ ಮುಂಭಾಗದಲ್ಲಿದ್ದ ಲಾರಿಗೂ ಅಪ್ಪಳಿಸಿದೆ.
ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಬಸ್ಸಿನ ಕ್ಲೀನರ್ ಮತ್ತು ಅಡುಗೆ ಸಹಾಯಕ ಮೃತಪಟ್ಟಿದ್ದಾರೆ. ಬಸ್ಸಿನಲ್ಲಿದ್ದ ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಕುಂದಾಪುರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


