ಬೆಳ್ತಂಗಡಿ: ಗ್ರಾಮೀಣ ಭಾಗದಲ್ಲಿ ಪಡಿತರ ವಿತರಣೆಗೆ ಒಟಿಪಿ ಸಮಸ್ಯೆ ಕಂಡುಬಂದಲ್ಲಿ ಒಟಿಪಿ ರಹಿತವಾಗಿ ಪಡಿತರ ವಿತರಣೆಗೆ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯತ್ ಸಭಾಭವನದಲ್ಲಿ ಇಂದು ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ ಹಾಗೂ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ದ.ಕ ಜಿಲ್ಲೆಯಲ್ಲಿ ಈಗಾಗಲೇ ಕುಚ್ಚಲು ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಪಡಿತರ ವಿತರಣೆಗೆ ಏನೆಲ್ಲ ಕ್ರಮ ಕೈಗೊಂಡಿದ್ದೀರಿ ಎಂಬ ಸಚಿವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು, ತಾಲೂಕಿನಲ್ಲಿ 66 ಪಡಿತರ ಅಂಗಡಿಗಳಲ್ಲಿ ಒಟಿಪಿ ಮುಖಾಂತರ ಪಡಿತರ ವಿತರಿಸಲಾಗುತ್ತಿದೆ. ಪ್ರಸಕ್ತ ಎ.1ರಿಂದ ಎ.6ರವರೆಗೆ ಶೇ. 34.63 ವಿತರಣೆಯಾಗಿದೆ. ಎಳನೀರಿನಲ್ಲಿ ಒಟಿಪಿ ಸಮಸ್ಯೆಯಾಗಿರುವುದು ಹೊರತಾಗಿ ಬೇರೆಲ್ಲ ಕಡೆಗಳಲ್ಲೂ ಒಟಿಪಿ ಮುಖಾಂತರವೇ ವಿತರಿಸಲಾಗುತ್ತಿದೆ. ಉಳಿದಂತೆ ಸ್ವಯಂಸೇವಕರ ಮೂಲಕ ಮನೆಗೆ ವಿತರಿಸಲಾಗುತ್ತಿದೆ ಎಂದರು. ಪ್ರತಿ ದಿವಸಕ್ಕೆ ಒಂದು ಪಡಿತರ ಅಂಗಡಿಯಲ್ಲಿ 200 ಮಂದಿಗೆ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ತಾಲೂಕಿಗೆ ಕುಚ್ಚಲು ಅಕ್ಕಿ ದಾಸ್ತಾನು ಆಗದಿರುವುದರಿಂದ ಈವರೆಗೆ ಎಲ್ಲೂ ವಿತರಣೆಯಾಗಿಲ್ಲ ಎಂದು ಸಚಿವರ ಗಮನ ಸೆಳೆದರು. ಜಿಲ್ಲೆಯ ಇತರೆಡೆಗಳಲ್ಲಿವಿತರಣೆಗೆ ಮುಂದಾಗಿದ್ದು ನಾಳೆಯಿಂದ ವಿತರಣೆಗೆ ಕ್ರಮ ವಹಿಸಲಾಗುವುದು. ಶೇ.40 ಕುಚ್ಚಲು ಹಾಗೂ ಶೇ.60 ರಂತೇ ಬೆಳ್ತಿಗೆ ಅಕ್ಕಿ ವಿತರಿಸಲಾಗುವುದು ಎಂದು ಸಚಿವರು ಸೂಚಿಸಿದರು.
234 ಮಂದಿ ಹೋಂ ಕ್ವಾರಂಟೈನ್
ತಾಲೂಕಿನಲ್ಲಿ ಕೊರೊನಾ ನಿಗಾದಲ್ಲಿರುವವರ ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ತಾಲೂಕಿನಲ್ಲಿ 234 ಮಂದಿ ಹೋಂ ಕ್ವಾರಂಟೈನ್ ಗಳಿದ್ದು ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. 234 ಮಂದಿ ಪೈಕಿ 218 ಮಂದಿ 14 ದಿನಗಳ ಅವಧಿ ಪೂರ್ಣಗೊಂಡಿದ್ದು, 50 ಮಂದಿ 28 ದಿವಸ ಪೂರ್ಣಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪಡಿತರ ಸಾಗಾಟಕ್ಕೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡುವಂತೆ ಸಚಿವರು ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಅವರಿಗೆ ತಿಳಿಸಿದರು ಅದೇ ರೀತಿ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೆ ಪಡಿತರ ಅಂಗಡಿ ತೆರೆದಿರಬೇಕು. ಯಾವುದೇ ಸಮಯದಲ್ಲೂ ಪಡಿತರರು ಬಂದಲ್ಲಿ ನೀಡಲು ವ್ಯವಸ್ಥೆ ಕಲ್ಪಿಸಬೇಕು. ಜತೆಗೆ
ಪಡಿತರ ಚೀಟಿ ಹೊಂದಿ, ಪಡಿತರ ಸಾಗಿಸುವಾಗ ಪೊಲೀಸರು ತೊಂದರೆ ನೀಡಬಾರದು ಎಂದು ಸೂಚನೆ ನೀಡಿದರು.
ಯಾವುದೇ ಸಂಘ ಸಂಸ್ಥೆಗಳು ಬಡವರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸುವುದಕ್ಕೆ ಅಕ್ಷೇಪವಿಲ್ಲ ಅದರೆ ಕೊಡುವ ಮಾರ್ಗದಲ್ಲಿ ಯಾವುದೇ ಸ್ಪರ್ಧಾತ್ಮಕ ವಾತಾವರಣ ಪಡೆದು ಸಂಘರ್ಷಕ್ಕೆ ಕಾರಣವಾಗಬಾರದು ಎಂಬ ಕಾರಣಕ್ಕಾಗಿ ತಹಶೀಲ್ದಾರ್ ಅಥವಾ ಸ್ಥಳೀಯ ಟಾಸ್ಕ್ ಫೋರ್ಸ್ ಸಮಿತಿಯ ಮೂಲಕವೇ ವಿತರಣೆಯಾಗಬೇಕು ಎಂದರು.
ಸೋಂಕು ಪತ್ತೆಯಾದ ಕಲ್ಲೇರಿ ಪ್ರದೇಶದ ಮೇಲೆ ನಿಗಾ
ಕಲ್ಲೇರಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹಾಗೂ ಖಾಸಗಿ ವೈದ್ಯರನ್ನು ಸೇವೆಗೆ ಬಳಸಿಕೊಳ್ಳುವಂತೆ ಸಂಸದ ನಳೀನ್ ಕುಮಾರ್ ಚರ್ಚಿಸಿದರು. ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿ, ಈಗಾಗಲೆ ಕಲ್ಲೇರಿಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾದ ಬಳಿಕ ಕಾಲೊನಿಯ 88 ಮನೆಗಳನ್ನು ನಿಗಾದಲ್ಲಿರಿಸಿ, ಪ್ರತ್ಯೇಕ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗಿದೆ. ಉಳಿದಂತೆ ದಾನಿಗಳ ನೆರವಿನಿಂದ ಗ್ರಾ.ಪಂ., ತಾಲೂಕು ಆಡಳಿತ ಆಹಾರ ಕಿಟ್ ಸೇರಿದಂತೆ ಅಗತ್ಯ ವಸ್ತು ಒದಗಿಸುತ್ತಿದೆ ಎಂದು ಹೇಳಿದರು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಂದಲ್ಲಿ ಶೀಘ್ರ ಬೋರ್ ವೆಲ್ ಕೊರೆಸಿ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಟಾಸ್ಕ್ ಪೋರ್ಸ್ ಸಮಗ್ರ ಕಾರ್ಯಯೋಜನೆ ರೂಪಿಸುವಂತೆ ತಾ.ಪಂ. ಇ.ಒ.ಗೆ ಸೂಚಿಸಿದರು.
ವಲಸೆ ಕಾರ್ಮಿಕರು ನಿರ್ಗತಿಕರ ಆಹಾರ ವ್ಯವಸ್ಥೆ ಕುರಿತು ಸಚಿವರ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು, 7 ಗುತ್ತಿಗೆದಾರರ ಒಟ್ಟು 154 ವಲಸೆ ಕಾರ್ಮಿಕರಿಗೆ ಗುತ್ತಿಗೆದಾರರೆ ಆಹಾರ ಒದಗಿಸುವಂತೆ ಕ್ರಮ ವಹಿಸಲಾಗಿದೆ. ಉಳಿದಂತೆ 6 ಮಂದಿ ಧರ್ಮಸ್ಥಳದಲ್ಲಿ, 14 ಮಂದಿ ನಾರಾವಿ ಜೈನ ಬಸದಿಯಲ್ಲಿ, 2 ಮಂದಿ ಕುತ್ಯಾರಿನಲ್ಲಿ ವಸತಿ, ಆಹಾರ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸೇತುವೆ ಪೂರ್ಣಗೊಳಿಸಲು ಅನುಮತಿ ಅಗತ್ಯ
ತಾಲೂಕಿನಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿಯಾಗುತ್ತಿದ್ದು ಸೇತುವೆ ಕಾಮಗಾರಿಗಳಲ್ಲಿ ಮಣ್ಣು ಹಾಕಿ ಅರ್ಧಕ್ಕೆ ನಿಂತುಹೋಗಿವೆ. ಮಳೆಗಾಲದಲ್ಲಿ ಮಳೆಗೆ ಕೊಚ್ಚಿಹೋಗುವ ಸಾಧ್ಯತೆ ಇದ್ದು ತುರ್ತು ಕಾಮಗಾರಿಗೆ ಸರಕಾರದ ಆದೇಶ ನೀಡುವಂತೆ ಶಾಸಕರು ಮನವಿ ಮಾಡಿದರು. ಈ ಕುರಿತು ಸಧ್ಯ ಅರ್ಧಕ್ಕೆ ನಿಂತಿರುವ ಕಾಮಗಾರಿಗಳ ಪಟ್ಟಿ ತಯಾರಿಸಿ ಪರಿಶೀಲನಾ ವರದಿಯನ್ನು ಸರಕಾರಕ್ಕೆ ಕಳುಹಿಸಿಕೊಡುವಂತೆ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳಿಗೆ ಸಚಿವರಿಗೆ ಸೂಚಿಸಿದರು.