ತಿರುವನಂತಪುರಂ: ಕೇರಳದ ಕೊಲ್ಲಂ ಜಿಲ್ಲೆಯ ಪೊಲೀಸರು ನಡೆಸಿದ ತನಿಖೆಯಲ್ಲಿ 1 ತಿಂಗಳ ಹಿಂದೆ ನಡೆದ ಕೊಲೆ ರಹಸ್ಯ ಬಯಲಾಗಿದೆ.
42 ವರ್ಷದ ಸುಚಿತ್ರಾ ಕೊಲೆಯಾದ ಮಹಿಳೆ. ಪಾಲಕ್ಕಾಡ್ ಮೂಲದ ಸಂಗೀತ ಶಿಕ್ಷಕ ಪ್ರಶಾಂತ್(34) ಕೊಲೆ ಆರೋಪಿಯಾಗಿದ್ದಾನೆ. ಇವರಿಬ್ಬರ ನಡುವಿನ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.
ಕೊಟ್ಟಾಯಂ ಸಮೀಪದ ತ್ರೀಕೋವಿಲ್ ವಟ್ಟಂ ಮೂಲದ ಸುಚಿತ್ರಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಪತಿಯಿಂದ ವಿಚ್ಛೇದನ ಪಡೆದ ಬಳಿಕ ಪೋಷಕರ ಜೊತೆಗೆ ವಾಸವಾಗಿದ್ದ ಸುಚಿತ್ರಾ ಮಾರ್ಚ್ 18 ರಂದು ಕೊಚ್ಚಿಯಲ್ಲಿ ತರಬೇತಿಗೆ ಹೋಗುವುದಾಗಿ ಮನೆಯಿಂದ ಹೋಗಿದ್ದು ಮಾರ್ಚ್ 20 ರಿಂದ ಆಕೆಯ ಮೊಬೈಲ್ ನಾಟ್ ರೀಚಬಲ್ ಆಗಿದೆ.
ಸುಚಿತ್ರಾ ನಾಪತ್ತೆಯಾಗಿರುವ ಬಗ್ಗೆ ಮಾರ್ಚ್ 22 ರಂದು ಕುಟುಂಬದವರು ಕೊಟ್ಟಾಯಂ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಪಾಲಕ್ಕಾಡ್ ಸಂಗೀತ ಶಿಕ್ಷಕ ಪ್ರಶಾಂತ್ ಜೊತೆಗೆ ಸಂಪರ್ಕದಲ್ಲಿರುವುದು ಮೊಬೈಲ್ ಕಾಲ್ ಡೀಟೇಲ್ಸ್ ಆಧಾರದಲ್ಲಿ ಗೊತ್ತಾಗಿದೆ.
ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮದುವೆಯಾಗಿ ಒಂದು ಮಗು ಹೊಂದಿರುವ ಪ್ರಶಾಂತ್ ಪತ್ನಿಯ ಸಂಬಂಧಿಯಾಗಿರುವ ಸುಚಿತ್ರಾ ಈತನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಳು. ಅಲ್ಲದೇ ಈತನೊಂದಿಗೆ ಇರಲು ಬಯಸಿದ್ದಳು.
ಆದರೆ ಮರ್ಯಾದೆಗೆ ಅಂಜಿದ ಪ್ರಶಾಂತ್ ನಿರಾಕರಿಸಿದ್ದಾನೆ. ಇದೇ ವಿಚಾರಕ್ಕೆ ಜಗಳವಾಗಿ ಸುಚಿತ್ರಾಳನ್ನು ಕೊಲೆ ಮಾಡಿದ ಪ್ರಶಾಂತ್ ಆಕೆಯ ಕಾಲುಗಳನ್ನು ಕತ್ತರಿಸಿ ಮೃತದೇಹವನ್ನು ಬೆಂಕಿ ಹಚ್ಚಲು ಪ್ರಯತ್ನ ನಡೆಸಿದ್ದು, ಕೊನೆಗೆ ಮನೆಯ ಆವರಣದಲ್ಲಿ ಹೂತುಹಾಕಿದ್ದಾನೆ. ಇದೆಲ್ಲವೂ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.